ಒಬ್ಬ ಬಾಲಕನನ್ನು ರಕ್ಷಿಸಲು ಹೋಗಿ ಕೊಳಕ್ಕೆ ಬಿದ್ದ ಕಾರು – ಆರು ಮಕ್ಕಳು ಜಲಸಮಾಧಿ

ಪಾಟ್ನಾ: ಕಾರೊಂದು ರಸ್ತೆ ಪಕ್ಕದ ಕೊಳಕ್ಕೆ ಬಿದ್ದ ಪರಿಣಾಮ ಆರು ಮಂದಿ ಬಾಲಕರು ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬೆಳ್ಳಂಬೆಳ್ಳಗೆ ಸಂಭವಿಸಿದೆ.

ಮೃತರನ್ನು ಉನೀತ್ ಕುಮಾರ್, ನಯನಾ ಕುಮಾರಿ, ಕರಣ್ ಕುಮಾರ್, ಮಿಥುನ್ ಕುಮಾರ್, ಅಜಯ್ ಕುಮಾರ್ ಹಾಗೂ ನಿತೇಷ್ ರಿಷಿದೇವ್ ಅಂತ ಗುರುತಿಸಲಾಗಿದೆ. ತಾರಾಬರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಖ್ ಸೈನಾ ಗ್ರಾಮದಲ್ಲಿ ಇಂದು ಬೆಳಗ್ಗೆ ಸುಮಾರು 7 ಗಂಟೆ ಈ ಘಟನೆ ನಡೆದಿದೆ ಎಂದು ತಾರಾಬರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಹಬೂಬ್ ಆಲಂ ತಿಳಿಸಿದ್ದಾರೆ.

ಮೃತರಲ್ಲಿ ಉನೀತ್ ಕುಮಾರ್ ಮತ್ತು ನಯನಾ ಕುಮಾರಿ ಇಬ್ಬರು ಒಡಹುಟ್ಟಿದವರಾಗಿದ್ದು, ಇನ್ನುಳಿದರು ಬೇರೆ ಬೇರೆ ಕುಟುಂಬದವರಾಗಿದ್ದಾರೆ. ಇವರೆಲ್ಲರೂ ಎಸ್‍ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಅಪಘಾತದಲ್ಲಿ ಮೋನು ಕುಮಾರ್ ಮಾತ್ರ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಮೃತ ಎಲ್ಲಾ ಮಕ್ಕಳು 6ರಿಂದ 15 ವರ್ಷದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರ ಇವರೆಲ್ಲರೂ ಮದುವೆಗೆಂದು ಬೋರಿಯಾರೆಯಿಂದ ಚಿಂಕಿ ಗ್ರಾಮಕ್ಕೆ ಹೋಗಿದ್ದರು. ಇಂದು ಬೆಳಗ್ಗೆ ಮದುವೆ ಸಮಾರಂಭ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ಸುಖ್ ಸೈನಾ ಗ್ರಾಮದ ಬಳಿ ಬಾಲಕನೊಬ್ಬ ರಸ್ತೆಗೆ ಅಡ್ಡ ಬಂದಿದ್ದಾನೆ. ಅಡ್ಡ ಬಂದ ಬಾಲಕನಿಗೆ ಡಿಕ್ಕಿ ಹೊಡೆಯುವುದನ್ನು ಚಾಲಕ ತಪ್ಪಿಸಲು ಪ್ರಯತ್ನಿಸಿದ್ದಾನೆ. ಪರಿಣಾಮ ನಿಯಂತ್ರಣ ಕಳೆದಕೊಂಡ ಕಾರು ರಸ್ತೆ ಬದಿಯಲ್ಲಿದ್ದ ಕೊಳಕ್ಕೆ ನುಗ್ಗಿದೆ. ಇದರಿಂದ ಕಾರಿನಲ್ಲಿದ್ದ 6 ಜನ ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಕೊಳಕ್ಕೆ ಬಿದ್ದ ತಕ್ಷಣ ಚಾಲಕ ಪರಾರಿಯಾಗಿದ್ದಾನೆ. ಸುತ್ತಮುತ್ತಲಿನ ಸ್ಥಳೀಯರು ಮಕ್ಕಳ ಸಹಾಯಕ್ಕೆ ಬಂದಿದ್ದಾರೆ. ಇನ್ನು ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮೃತ ದೇಹವನ್ನು ಕೊಳದಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಆಲಂ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *