ಗೌರಿ ಹತ್ಯೆ ಕೇಸ್: ಎಸ್‍ಐಟಿಯಿಂದ ಮೂವರು ಅರೆಸ್ಟ್

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗೆ ಎಸ್‍ಐಟಿ ಚುರುಕುಗೊಳಿಸಿದ್ದು ಮೂರು ಜನ ಆರೋಪಿಗಳನ್ನು ಬಂಧಿಸಿದೆ.

ಈಗಾಗಲೇ ಬಂಧನಕ್ಕೆ ಒಳಗಾಗಿರುವ ಹೊಟ್ಟೆ ಮಂಜ ಅಲಿಯಾಸ್ ನವೀನ್ ಕುಮಾರ್ ವಿಚಾರಣೆ ನಡೆಯುತ್ತಿದ್ದಂತೆ ಮತ್ತಷ್ಟು ಆರೋಪಿಗಳ ಬಗ್ಗೆ ಸುಳಿವು ಹೊರಬಿದ್ದಿದೆ.

ನವೀನ್ ಹೇಳಿಕೆ ದಾಖಲಿಸಿಕೊಂಡು ಮತ್ತಷ್ಟು ತನಿಖೆಗೆ ಇಳಿದಿದ್ದ ಎಸ್‍ಐಟಿ ಶಂಕಿತ ಮೂವರನ್ನ ವಶಕ್ಕೆ ಪಡೆದು ಬಂಧಿಸಿದೆ. ಮಂಗಳೂರಿನಲ್ಲಿ ಸುಚಿತ್, ಅಮಿತ್, ಅಮಲ್ ಎಂಬುವವರನ್ನ ಅರೆಸ್ಟ್ ಮಾಡಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧನಕ್ಕೆ ಒಳಗಾದ ಆರೋಪಿಗಳು ಹೊಟ್ಟೆ ಮಂಜನ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಮಹಾರಾಷ್ಟ್ರ ಶಾರ್ಪ್ ಶೂಟರ್ ಗಳ ಕೈವಾಡ ಸಹ ಹತ್ಯೆ ಹಿಂದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಆರೋಪಿ ಸುಚಿತ್ ಕಾಯಿನ್ ಬಾಕ್ಸ್ ಮುಖಾಂತರ ಎಲ್ಲರೊಂದಿಗೂ ಸಂಪರ್ಕದಲ್ಲಿರುತ್ತಿದ್ದ. ನವೀನ್ ಬಂಧನಕ್ಕೆ ಒಳಗಾದ ಬಳಿಕ ವೇಷ ಧರಿಸಿಕೊಂಡು ತಲೆಮರೆಸಿಕೊಂಡು ಮೂವರು ಆರೋಪಿಗಳು ಓಡಾಡುತ್ತಿದ್ದರು. ಕೊನೆಗೆ ಖಚಿತ ಮಾಹಿತಿ ಮೇರೆಗೆ ಎಸ್‍ಐಟಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

ಮತ್ತೊಂದೆಡೆ ಎಸ್‍ಐಟಿ ಅಧಿಕಾರಿಗಳು ಗುಜರಾತ್‍ನ ಅಹಮದಾಬಾದ್ ನಲ್ಲಿರುವ ಎಫ್‍ಎಸ್‍ಎಲ್ ಹಾಗು ಕರ್ನಾಟಕ ಎಫ್‍ಎಸ್‍ಎಲ್ ವರದಿ ಪಡೆದಿದ್ದು, ಗೌರಿ ಹತ್ಯೆ ಹಾಗೂ ಕಲಬುರ್ಗಿ ಹತ್ಯೆಗೆ ಒಂದೇ ವೆಪನ್ ಬಳಸಿರೋದು ಬೆಳಕಿಗೆ ಬಂದಿದೆ. 765 ರೈಫಲ್ ಬಳಸಿ ಗೌರಿ, ಕಲಬುರ್ಗಿ ಹತ್ಯೆ ಮಾಡಿರೋದು ತನಿಖೆಯಿಂದ ಹೊರಬಂದಿದೆ.

ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿರುವ ಗೌರಿ ಹತ್ಯೆಯ ಸಂಬಂಧ ಬುಧವಾರ ಎಸ್‍ಐಟಿ ಚಾರ್ಜ್‍ಶೀಟ್ ಸಲ್ಲಿಸೋ ಸಾಧ್ಯತೆಯಿದೆ.

Comments

Leave a Reply

Your email address will not be published. Required fields are marked *