ಐಎಂಎ ಕಚೇರಿಗೆ ಅಧಿಕೃತ ಬೀಗ ಮುದ್ರೆ – ಏರ್‌ಪೋರ್ಟ್‌ನಲ್ಲಿ ಮನ್ಸೂರ್ ಕಾರು ಪತ್ತೆ

ಬೆಂಗಳೂರು: ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಎಸ್‍ಐಟಿ ತಂಡ ಇಂದು ಅಧಿಕೃತವಾಗಿ ಐಎಂಎ ಕಚೇರಿ ಸೀಜ್ ಮಾಡಿದೆ.

ನಗರದ ಶಿವಾಜಿನಗರದಲ್ಲಿರುವ ಐಎಂಎ ಜ್ಯುವೆಲರ್ಸ್ ಕಚೇರಿಗೆ ಅಧಿಕೃತವಾಗಿ ಬೀಗ ಮುದ್ರೆ ಹಾಕಿದ್ದಾರೆ. ಐಎಂಎ ವಂಚನೆ ಪ್ರಕರಣ ತನಿಖಾ ಹಂತದಲ್ಲಿರುವ ಹಿನ್ನೆಲೆ ಎಸ್‍ಐಟಿ ಮಳಿಗೆಯನ್ನು ಸೀಜ್ ಮಾಡಿದೆ.

ಇತ್ತ ಮನ್ಸೂರ್ ಖಾನ್ ಕಾರು ಬೆಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ಕೆಐಎಎಲ್ ನಲ್ಲಿ ಕಾರು ವಶಕ್ಕೆ ಪಡೆದಿದ್ದಾರೆ. ಸದ್ಯ ಮನ್ಸೂರ್ ಕಾರು ಕೆಐಎಎಲ್‍ನಲ್ಲಿ ಪತ್ತೆ ಆಗಿರುವುದರಿಂದ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾಗಿರುವ ಕುರಿತು ಅನುಮಾನ ವ್ಯಕ್ತವಾಗಿದೆ.

ಸದ್ಯ ಲಭ್ಯವಾಗಿರುವ ಮಾಹಿತಿ ಅನ್ವಯ ಮನ್ಸೂರ್ ಖಾನ್ ಜೂನ್ 06 ರಂದು ಕೆಐಎಎಲ್ ನಲ್ಲಿ ಕಾರು ಬಿಟ್ಟು ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗಿದ್ದು, ರೇಂಜ್ ರೋವಾರ್ ಕಾರನ್ನು ನಿಲ್ಲಿಸಿ ಬಹಳ ದಿನಗಳಾದರು ಕಾರು ತೆಗೆಯಲು ಯಾರು ಬಾರದ ಹಿನ್ನೆಲೆ ವಿಮಾನ ನಿಲ್ದಾಣದ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಕಾರನ್ನ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಆಡಿಯೋ ಬಿಡುಗಡೆ ಮಾಡಿ ನಾಪತ್ತೆಯಾಗಿದ್ದ ಮನ್ಸೂರ್ ಖಾನ್ ವಿದೇಶಕ್ಕೆ ತೆರಳಿದ್ದಾನೆ ಎಂಬ ಮಾತಿಗೆ ಸದ್ಯ ಸಾಕಷ್ಟು ಪುಷ್ಠಿ ನೀಡಿದ್ದು, ಅಂತರಾಷ್ಟ್ರಿಯ ವಿಮಾನದಲ್ಲಿ ಮನ್ಸೂರ್ ಖಾನ್ ಪತ್ತೆ ಆಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಆತ ನಿಜಕ್ಕೂ ವಿದೇಶಕ್ಕೆ ತೆರಳಿದ್ದಾನಾ ಅಥವಾ ಬೇರೆ ಕಡೆ ತೆರಳಿದ್ದಾನಾ ಎಂಬದನ್ನು ಪೊಲೀಸರು ಖಚಿತ ಪಡಿಸಿಕೊಳ್ಳಲು ತನಿಖೆ ಚುರುಕುಗೊಳಿಸಿದ್ದಾರೆ.

Comments

Leave a Reply

Your email address will not be published. Required fields are marked *