ಅಮೂಲ್ಯ ಸ್ನೇಹಿತರ ವಿಚಾರಣೆ – ಹುಟ್ಟೂರಿಗೆ ಭೇಟಿ ನೀಡಲಿದೆ ಎಸ್‍ಐಟಿ

– ಅಮೂಲ್ಯಗೆ ನಕ್ಸಲ್ ನಂಟು ಶಂಕೆ
– ಭಾಷಣದ ಹಿಂದೆ ಹಲವು ಜನರ ಶ್ರಮವಿದೆ ಎಂದಿದ್ದ ದೇಶದ್ರೋಹಿ

ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿ ಜೈಲು ಪಾಲಾಗಿರುವ ಅಮೂಲ್ಯಾ ಲಿಯೋನಾ ಹುಟ್ಟುರಿಗೆ ವಿಶೇಷ ತನಿಖಾ ತಂಡ(ಎಸ್‍ಐಟಿ) ತೆರಳಲು ಸಿದ್ಧತೆ ನಡೆಸಿದೆ.

ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಚಿಕ್ಕಪೇಟೆ ಎಸಿಪಿ ಮಾಂತಾ ರೆಡ್ಡಿ, ಉಪ್ಪಾರಪೇಟೆ ಇನ್ಸ್ ಪೆಕ್ಟರ್ ಸುರೇಶ್ ಹಾಗೂ ಮಾರುಕಟ್ಟೆ ಠಾಣೆಯ ಇನ್ಸ್ ಪೆಕ್ಟರ್ ಸತೀಶ್ ನೇತೃತ್ವದ ತಂಡದಿಂದ ಪ್ರಕರಣದ ತನಿಖೆ ಮಾಡಲಾಗುತ್ತಿದೆ. ಸದ್ಯ ಆರೋಪಿ ಅಮೂಲ್ಯಳ ನಿಕಟ ಸಂಪರ್ಕದಲ್ಲಿರುವ ಸ್ನೇಹಿತರ ವಿಚಾರಣೆ ಮಾಡಲಾಗುತ್ತಿದೆ. ಸ್ನೇಹಿತರ ವಿಚಾರಣೆ ಮಾಹಿತಿ ಕಲೆ ಹಾಕಿದ ಮೇಲೆ ಆರೋಪಿ ಅಮೂಲ್ಯಾಳ ಹುಟ್ಟೂರಿಗೆ ತೆರಳಲು ಸಜ್ಜಾಗಿದೆ.

ಆರೋಪಿ ಅಮೂಲ್ಯಾಳಿಗೆ ನಕ್ಸಲ್ ನಂಟಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿರುವುದರಿಂದ ತನಿಖಾ ತಂಡ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿದೆ. ಆರೋಪಿ ಅಮೂಲ್ಯಾಳ ಹುಟ್ಟೂರು ಚಿಕ್ಕಮಗಳೂರಿನ ಕೊಪ್ಪಕ್ಕೆ ಭೇಟಿ ನೀಡಿ ತಂದೆ ತಾಯಿಯರನ್ನು ತನಿಖಾ ತಂಡ ವಿಚಾರಣೆ ಮಾಡಲಿದೆ.

ಆರೋಪಿ ಬಂಧನವಾದ ಬಳಿಕ ಪೊಲೀಸರ ಮುಂದೆ ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದ್ದು, ಸಿಎಎ ವಿರುದ್ಧ ಕಾರ್ಯಕ್ರಮದಲ್ಲಿ ಮಾತನಾಡಲು ಹೇಳಿಕೊಡಲು ಗಾಡ್ ಫಾದರ್ ಗಳು ಇದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಆರೋಪಿಯ ಹಿಂದೆ ಕೆಲಸ ಮಾಡುತ್ತಿರುವವರು ಯಾರು ಎನ್ನುವುದನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ವಿಡಿಯೋದಲ್ಲಿ ಮಾತನಾಡಿದ್ದ ಅಮೂಲ್ಯ, ನನ್ನ ಭಾಷಣದ ಹಿಂದೆ ಹಲವು ಮಂದಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ನನ್ನ ಬೆನ್ನ ಹಿಂದಿದ್ದಾರೆ. ಅವರೆಲ್ಲ ನಿಜವಾದ ಹೀರೋಗಳು. ಅವರ ಪ್ರತಿನಿಧಿಯಾಗಿ ನಾನು ಮಾತನಾಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಳು.

ಆರೋಪಿ ಅಮೂಲ್ಯ ಬಂಧನವಾದ ಬಳಿಕ ಅವರ ತಂದೆ ಪ್ರತಿಕ್ರಿಯಿಸಿ, ನನ್ನ ಮಗಳು ಕೆಲ ಮುಸ್ಲಿಮರೊಂದಿಗೆ ನಂಟು ಹೊಂದಿದ್ದಳು ಎಂದು ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ತನಿಖಾ ತಂಡ, ಕೊಪ್ಪಕ್ಕೆ ಹೋಗಿ ತಂದೆ ತಾಯಿಯನ್ನು ವಿಚಾರಣೆ ನಡೆಸಿ, ಕೆಲ ವಿಚಾರಗಳ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಲಿದ್ದಾರೆ ಏನ್ನಲಾಗಿದೆ.

ನಡೆದಿದ್ದೇನು?
ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಗುರುವಾರ ನಗರದ ಪ್ರೀಡಂ ಪಾರ್ಕಿನಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಕಾರ್ಯಕ್ರಮದ ವೇದಿಕೆಯಲ್ಲೇ ಅಮೂಲ್ಯ ಲಿಯೋನಾ, ‘ಪಾಕಿಸ್ತಾನ ಜಿಂದಾಬಾದ್’ ಎಂದು ಜೈಕಾರ ಕೂಗಿದ್ದಳು. ಅಮೂಲ್ಯ ಈ ರೀತಿ ಘೋಷಣೆ ಕೂಗುತ್ತಿದ್ದಂತೆ ಓವೈಸಿ ಗೊಂದಲಗೊಂಡಿದ್ದು, ಆಕೆಯನ್ನು ಮಾತನಾಡದಂತೆ ತಡೆಯಲು ಪ್ರಯತ್ನಿಸಿದರು. ಕೂಡಲೇ ತಕ್ಷಣ ಸಂಘಟಕರು ಮೈಕ್ ಕಿತ್ತುಕೊಂಡು ಅಮೂಲ್ಯಳನ್ನು ತಡೆದಿದ್ದರು. ಕೋರ್ಟ್ ಈಕೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರ ಸೇರಿದ್ದಾಳೆ.

Comments

Leave a Reply

Your email address will not be published. Required fields are marked *