ಮನ್ಸೂರ್ ಖಾನ್ ಮನೆ ಮೇಲೆ ಎಸ್‍ಐಟಿ ದಾಳಿ- 300 ಕೆ.ಜಿ ನಕಲಿ ಚಿನ್ನದ ಬಿಸ್ಕೆಟ್ ಪತ್ತೆ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ಐಎಂಎ ಮಾಲೀಕ ಮನ್ಸೂರ್ ಖಾನ್‍ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಇದರ ಬೆನ್ನಲ್ಲೇ ಇದೀಗ ಮನ್ಸೂರ್ ಖಾನ್ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಶಾಂತಿ ನಗರದಲ್ಲಿರುವ ಆರೋಪಿ ಮನ್ಸೂರ್ ಖಾನ್ ಮನೆ ಮೇಲೆ ಎಸ್‍ಐಟಿ ದಾಳಿ ನಡೆಸಿದ್ದು, ದಾಳಿಯ ವೇಳೆ 300 ಕೆ.ಜಿ ನಕಲಿ ಚಿನ್ನದ ಬಿಸ್ಕೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಮನೆಯ ಕೊನೆಯಲ್ಲಿ ಟೆರೆಸ್ ಮೇಲೆ ಇದ್ದ ಈಜುಕೊಳದಲ್ಲಿ ಈ ನಕಲಿ ಬಿಸ್ಕೆಟ್‍ಗಳನ್ನು ಮನ್ಸೂರ್ ಖಾನ್ ಬಚ್ಚಿಟ್ಟಿದ್ದ ಎಂದು ತಿಳದು ಬಂದಿದೆ. ಮನ್ಸೂರ್ ಖಾನ್‍ನ್ನು ಎಸ್‍ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಅನಾರೋಗ್ಯದ ನೆಪವೊಡ್ಡಿದರೂ ಸಹ ಚಿಕಿತ್ಸೆ ಕೊಡಿಸಿ ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಮನ್ಸೂರ್ ಖಾನ್ ಭೇಟಿಯಾಗಲು ಯಾರಿಗೂ ಅವಕಾಶ ನೀಡದೆ ವಿಚಾರಣೆ ನಡೆಸಲಾಗುತ್ತಿದ್ದು, ಕುಟುಂಬಸ್ಥರು, ಪ್ರಭಾವಿಗಳು ಹಾಗೂ ರಾಜಕಾರಣಿಗಳು ಸೇರಿದಂತೆ ಯಾರನ್ನೂ ಸಹ ಮನ್ಸೂರ್ ಖಾನ್‍ನನ್ನು ಭೇಟಿಯಾಗಲು ಬಿಡುತ್ತಿಲ್ಲ.

ಈ ಹಿಂದೆ ಎಸ್‍ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಎದೆ ನೋವು ಎಂದು ಮನ್ಸೂರ್ ಖಾನ್ ಕುಂಟು ನೆಪವೊಡ್ಡಿದ್ದ. ಬಳಿಕ ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಎಸ್‍ಐಟಿ ಅಧಿಕಾರಿಗಳು ಇತ್ತೀಚೆಗೆ ಮನ್ಸೂರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪ್ರಾರಂಭಿಸಿದ್ದರು. ಡಿಸಿಪಿ ಗಿರೀಶ್ ಹಾಗೂ ಎಸಿಪಿ ಬಾಲರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದ ವೇಳೆ ತಡರಾತ್ರಿ ಮತ್ತೆ ಎದೆ ನೋವು ಎಂದು ಮನ್ಸೂರ್ ಖಾನ್ ಹೇಳಿದ್ದು, ನಂತರ ಅಧಿಕಾರಿಗಳು ಮನ್ಸೂರ್ ಖಾನ್ ನನ್ನು ಜಯದೇವ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು.

Comments

Leave a Reply

Your email address will not be published. Required fields are marked *