ಸಿಮೆಂಟ್ ಬ್ಲಾಕ್ ಫ್ಯಾಕ್ಟರಿಯಲ್ಲಿ ಸಿಕ್ತು ನೂರಾರು ಕೋಟಿ – ಮನ್ಸೂರ್ ಆಪ್ತ ಅರೆಸ್ಟ್

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆರೋಪಿ ಮನ್ಸೂರ್ ಜನರಿಗೆ ಮೋಸ ಮಾಡಿದ್ದ ಹಣವನ್ನು ಎಲ್ಲೆಲ್ಲಿ ಬಚ್ಚಿಟ್ಟಿದ್ದ ಎಂದು ಕೇಳಿದರೆ ದಂಗಾಗುತ್ತೀರಿ. ಕೇವಲ ಬೆಂಗಳೂರು ಮಾತ್ರವಲ್ಲದೆ ಬೇರೆ ಜಿಲ್ಲೆಗಳಲ್ಲಿಯೂ ಚಿನ್ನ, ಹಣವನ್ನು ಮನ್ಸೂರ್ ಬಚ್ಚಿಟ್ಟಿದ್ದನು.

ಹೌದು, ಸದ್ಯ ಇಡಿ ಅಧಿಕಾರಿಗಳ ಬಳಿಕ ಮನ್ಸೂರ್ ಖಾನ್ ಎಸ್‍ಐಟಿ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ. ಈ ವೇಳೆ ಬೆಂಗಳೂರು ನಗರದಲ್ಲಷ್ಟೇ ಅಲ್ಲದೇ ಹೊರಗಿನ ಜಿಲ್ಲೆಗಳಲ್ಲಿ ಕೋಟಿಗಟ್ಟಲೆ ಹಣವನ್ನು ಬಚ್ಚಿಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ.

ಎಸ್‍ಐಟಿ ಪೊಲೀಸರ ತನಿಖೆಯಲ್ಲಿ ಮನ್ಸೂರ್ ಮತ್ತೊಂದು ಅಡುಗುತಾಣ ಬಯಲಾಗಿದೆ. ಕೋಲಾರದ ಮಾಲೂರಿನ ಬಳಿ ಇರುವ ಸಿಮೆಂಟ್ ಬ್ಲಾಕ್ ತಯಾರಕ ಫ್ಯಾಕ್ಟರಿಯಲ್ಲಿ ಮನ್ಸೂರ್ ನೂರಾರು ಕೋಟಿ ಹಣ, ಚಿನ್ನಾಭರಣ ಪತ್ತೆಯಾಗಿದೆ.

ಅಷ್ಟೇ ಅಲ್ಲದೆ, ಈ ಹಣ, ಒಡವೆ ಕಾಯಲೆಂದೇ ಫ್ಯಾಕ್ಟರಿಯಲ್ಲಿ ಗನ್‍ಮ್ಯಾನ್‍ಗಳನ್ನು ಕೂಡ ನೇಮಕ ಮಾಡಲಾಗಿತ್ತು. ಮನ್ಸೂರ್ ಖಾನ್ ಸ್ನೇಹಿತ ನಾಟಿ ವೈದ್ಯ ಖಮರುಲ್ಲಾ ಜಮಾಲ್ ಇದರ ಉಸ್ತುವಾರಿ ವಹಿಸಿಕೊಂಡಿದ್ದನು. ತಾನೇ ಜಮೀನು ತೆಗೆದುಕೊಂಡು, ಖಮರುಲ್ಲಾ ಜಮಾಲ್‍ಗೆ ಮನ್ಸೂರ್ ಫ್ಯಾಕ್ಟರಿ ಮಾಡಿಕೊಟ್ಟಿದ್ದನು. ಹಾಗೆಯೇ ನಾಟಿ ವೈದ್ಯದ ಜೊತೆ ಮಾಟ ಮಂತ್ರ ಮಾಡುತ್ತೇನೆ ಎಂದು ಖಮರುಲ್ಲಾ ಜನರನ್ನು ಹೆದರಿಸುತ್ತಿದ್ದನು. ಹೀಗೆ ಈ ಫ್ಯಾಕ್ಟರಿ ಬಳಿ ಜನರು ಬಾರದಂತೆ ನೋಡಿಕೊಂಡಿದ್ದನು.

ಈ ಬಗ್ಗೆ ತಿಳಿದು ಸಿಮೆಂಟ್ ಫ್ಯಾಕ್ಟರಿ ಪರಿಶೀಲನೆ ನಡೆಸಿರುವ ಎಸ್‍ಐಟಿ ಪೊಲೀಸರು ಖಮರುಲ್ಲಾನನ್ನು ಬಂಧಿಸಿ, ನಗದು ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಶಾಂತಿನಗರದ ತನ್ನ ಅಪಾರ್ಟ್‌ಮೆಂಟಿನಲ್ಲಿ ಮನ್ಸೂರ್ ಸ್ವಿಮ್ಮಿಂಗ್ ಪೂಲ್‍ನಲ್ಲಿ 300 ನಕಲಿ ಚಿನ್ನದ ಬಿಸ್ಕತ್ ಬಚ್ಚಿಟ್ಟಿರುವುದು ಕೂಡ ಬೆಳಕಿಗೆ ಬಂದಿದ್ದು, ಅದನ್ನೂ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *