ಗೌರಿ ಹತ್ಯೆ ಪ್ರಕರಣ-ಮುಂಬೈ ಮೂಲದ ಮತ್ತೋರ್ವ ಆರೋಪಿ ಎಸ್‍ಐಟಿ ವಶಕ್ಕೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಎಸ್‍ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬೈನ ಶರದ್ ಕಲಾಸ್ಕರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಕೋಕಾ ವಿಶೇಷ ಕೋರ್ಟ್ ಗೆ ಹಾಜರು ಪಡಿಸಿ 20 ದಿನಗಳ ಕಸ್ಟಡಿಗೆ ಪಡೆದಿದ್ದಾರೆ. ಮುಂಬೈನಲ್ಲಿ ಎಟಿಎಸ್ ದಾಳಿ ವೇಳೆ ಶರದ್ ಕಲಾಸ್ಕರ್ ಬಳಿ 19 ಪಿಸ್ತೂಲ್ ಜಪ್ತಿಯಾಗಿತ್ತು. ಜಪ್ತಿಯಾದ ಪಿಸ್ತೂಲ್‍ಗಳಲ್ಲಿ ಎರಡು ಗೌರಿ ಹತ್ಯೆಗೆ ಬಳಸಿರುವ ಶಂಕೆ ವ್ಯಕ್ತವಾಗಿತ್ತು. ಗೌರಿ ಹತ್ಯೆಗೆ ಬಳಸಿರುವ ಪಿಸ್ತೂಲ್ ಹಿಂದೆ ಕಲಾಸ್ಕರ್ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್‍ಐಟಿ ಪೊಲೀಸರು ಶರದ್ ಕಲಾಸ್ಕರ್‍ನನ್ನು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.

ಈಗಾಗಲೇ ಗೌರಿ ಲಂಕೇಶ್ ಕೇಸ್‍ನಲ್ಲಿ ಎಸ್‍ಐಟಿ ಪೊಲೀಸರ ವಶದಲ್ಲಿದ್ದ ಮತ್ತೊಬ್ಬ ಆರೋಪಿ ಸುಧನ್ವ ಗೋಂಧಲೇಕರ್ ಮತ್ತೆ 10 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ. ಗುರುವಾರ ಸುಧನ್ವ ಗೋಂಧಲೇಕರ್ ಪೊಲೀಸ್ ಕಸ್ಟಡಿ ಅಂತ್ಯವಾಗಿತ್ತು. ಹಾಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ಎಸ್‍ಐಟಿ ಪೊಲೀಸರು, ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಶಿವಸೇನೆ ಪಕ್ಷದ ಮಾಜಿ ಕಾರ್ಪೋರೇಟರ್ ಶ್ರೀಕಾಂತ್ ಪನ್ಗಾರ್ಕರ್ ಎಂಬಾತನನ್ನು ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಬಂಧಿತ ಕಾರ್ಪೋರೇಟರ್ ಮೇಲೆ ವಿಚಾರವಾದಿಗಳು ಮತ್ತು ಚಿಂತಕರ ಹತ್ಯೆಗೆ ಶ್ರೀಕಾಂತ್ ಹಣಕಾಸು ಸಹಾಯ ಮಾಡುತ್ತಿದ್ದನು ಎಂಬ ಆರೋಪಗಳಿವೆ. ಹೀಗಾಗಿ ಶ್ರೀಕಾಂತ್ ನನ್ನು ಪುಣೆಯ ಎಸ್‍ಐಟಿ ಪೊಲೀಸರು ಬಂಧಿಸಿ ಮುಂಬೈ ಜೈಲಿನಲ್ಲಿ ಇರಿಸಿದ್ದರು. ಬಾಡಿ ವಾರೆಂಟ್ ಮೂಲಕ ಬೆಂಗಳೂರು ಎಸ್‍ಐಟಿ ಪೊಲೀಸರು ಆತನನ್ನು ಕರ್ನಾಟಕಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *