ದುಬೈಗೆ ಓಡೋಗಿದ್ದ ಮನ್ಸೂರ್ ವಾಪಸ್- ದೆಹಲಿಗೆ ಬರುತ್ತಿದ್ದಂತೆ ಲಾಕ್ ಮಾಡಿದ ಖಾಕಿಪಡೆ

ಬೆಂಗಳೂರು: ಐಎಂಎ ಸಾವಿರಾರು ಕೋಟಿ ರೂಪಾಯಿ ವಂಚನೆ ಕೇಸ್ ಸಂಬಂಧ ದುಬೈಗೆ ಓಡಿ ಹೋಗಿದ್ದ ವಂಚಕ ಮನ್ಸೂರ್ ಖಾನ್‍ನನ್ನು ಬಂಧಿಸಲಾಗಿದೆ.

ಮಧ್ಯರಾತ್ರಿ 1.30ರ ಸುಮಾರಿಗೆ ದುಬೈನಿಂದ ದೆಹಲಿಗೆ ಬಂದಿಳಿದ ಮನ್ಸೂರ್ ಖಾನ್‍ನನ್ನು ಎಸ್‍ಐಟಿ(ವಿಶೇಷ ತನಿಖಾ ತಂಡ) ಪೊಲೀಸರು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದಾರೆ. ಇಂದು ಆತನನ್ನು ಎಸ್‍ಐಟಿ ಪೊಲೀಸರು ಬೆಂಗಳೂರಿಗೆ ಕರೆತರಲಿದ್ದಾರೆ.

ಅನಾರೋಗ್ಯದ ಕಾರಣ ನೀಡಿ ಭಾರತಕ್ಕೆ ಮರಳುತ್ತಿದ್ದೇನೆ ತಮಗೆ ಜೀವ ಭಯ ಇದ್ದು, ಪೊಲೀಸರು ರಕ್ಷಣೆ ಕೊಡಬೇಕು ಎಂದು ಕೋರಿ ಸೋಮವಾರ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದನು. ಆದರೆ 24 ಗಂಟೆಗಳಲ್ಲಿ ಮನ್ಸೂರ್ ವಾಪಸ್ ಬರಲಿಲ್ಲ. ರಾತ್ರಿ ದೆಹಲಿಗೆ ಬಂದು ಎಸ್‍ಐಟಿ ಖೆಡ್ಡಾಗೆ ಬಿದ್ದಿದ್ದಾನೆ.

ಸುಮಾರು 60 ಸಾವಿರ ಮಂದಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಜೂನ್ 8 ರಂದು ರಾತ್ರೋರಾತ್ರಿ ದುಬೈಗೆ ಎಸ್ಕೇಪ್ ಆಗಿದ್ದನು. ವಿಷಯ ತಿಳಿದ ಹೂಡಿಕೆದಾರರು ಎಸ್‍ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಮನ್ಸೂರ್ ಖಾನ್ ಬಂಧನ ಬೆನ್ನಲ್ಲೇ ಹಲವರಿಗೆ ನಡುಕ ಶುರುವಾಗಿದೆ. ಈ ನಡುವೆ ಬನ್ನೇರುಘಟ್ಟ ರಸ್ತೆಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದ ಮೌಲ್ವಿ ಉಮರ್ ಬಶೀರ್ ಎಂಬವರನ್ನು ಎಸ್‍ಐಟಿ ಬಂಧಿಸಿದೆ.

ಐಎಂಎನಲ್ಲಿ ಹೂಡಿಕೆ ಮಾಡುವಂತೆ ಮೌಲ್ವಿ ಬಶೀರ್ ಮಸೀದಿಗಳಲ್ಲಿ ಪ್ರಚಾರ ಮಾಡಿದ್ದನು. ಇದಕ್ಕೆ ಪ್ರತಿಯಾಗಿ ಐಎಂಎ ಮಾಲೀಕನಿಂದ ಬಶೀರ್, 60 ಲಕ್ಷ ಹಣ ಮತ್ತು 15 ಲಕ್ಷ ಮೌಲ್ಯದ ವಾಹನವೊಂದನ್ನು ಪಡೆದಿದ್ದ ಎನ್ನಲಾಗಿದೆ.

ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಎಸ್‍ಐಟಿಗೆ ವಹಿಸಿತ್ತು. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮನ್ಸೂರ್ ವಿರುದ್ಧ 40 ಸಾವಿರ ದೂರು ದಾಖಲಾಗಿತ್ತು. ಹೀಗಾಗಿ ಮನ್ಸೂರ್‍ಗಾಗಿ ಎಸ್‍ಐಟಿ ಮತ್ತು ಇಡಿ ತಂಡ ಕಾಯುತ್ತಿದ್ದು, ಇದೀಗ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Comments

Leave a Reply

Your email address will not be published. Required fields are marked *