ಟಿವಿ ಕ್ರೈಂ ಶೋದಿಂದ ಪ್ರೇರಣೆ- 2 ವರ್ಷದ ತಮ್ಮನನ್ನೇ ಕೊಂದ 14ರ ಅಕ್ಕ

ಡೆಹ್ರಾಡೂನ್: ಟಿವಿಯಲ್ಲಿ ಪ್ರಸಾರವಾಗುವ ಕ್ರೈಂ ಶೋ ನೋಡಿ ಪ್ರೇರಣೆಗೊಂಡು ಇಬ್ಬರು ಅಪ್ರಾಪ್ತೆಯರು ಎರಡು ವರ್ಷದ ಸಹೋದರನನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಉತ್ತರಾಖಂಡ್‍ನ ಹರಿದ್ವಾರದ ಜವಲಪುರದಲ್ಲಿ ಘಟನೆ ನಡೆದಿದೆ. ಇಬ್ಬರು ಅಪ್ರಾಪ್ತೆಯರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಕೊಲೆ ಮಾಡಲು ಹೇಗೆ ಪ್ಲಾನ್ ಮಾಡಿದಿರಿ ಎಂಬ ಪ್ರಶ್ನೆಗೆ ಬಾಲಕಿಯರು ಆಘಾತಕಾರಿ ಉತ್ತರ ನೀಡಿದ್ದಾರೆ. ಟಿವಿಯಲ್ಲಿ ಬರುತ್ತಿದ್ದ ಕ್ರೈಂ ಶೋ ನೋಡಿಯೇ ಸಹೋದರನ ಕೊಲೆಗೆ ಸಂಚು ರೂಪಿಸಿದೆವು ಎಂದು ಒಪ್ಪಿಕೊಂಡಿದ್ದಾರೆ.

ನವೆಂಬರ್ 29ರಂದು ಮಗುವಿನ ದೇಹವು ಗಂಗಾ ನದಿಯಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಎಚ್ಚರಗೊಂಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಪ್ರಾಥಮಿಕ ತನಿಖೆ ನಡೆಸಲಾಗಿದ್ದು, ಮೊದಲು ಮಗುವಿನ ಕುಟುಂಬದವರನ್ನೇ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಸತ್ಯ ಬಯಲಾಗಿದ್ದು, 14 ವರ್ಷದ ಸಹೋದರಿ ಹಾಗೂ 13 ವರ್ಷದ ಸೋದರ ಸಂಬಂಧಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ನಂತರ ಇಬ್ಬರೂ ಅಪ್ರಾಪ್ತೆಯರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಕಥೆಯ ರೀತಿಯಲ್ಲಿ ಘಟನೆಯನ್ನು ವಿವರಿಸಿದ್ದಾರೆ. ಮಗುವಿನ ಅಕ್ಕ ಮಾಹಿತಿ ನೀಡಿ, ತಮ್ಮನನ್ನು ನೋಡಿಕೊಳ್ಳುವುದು ಕಿರಿಕಿರಿ ಎನ್ನಿಸುತ್ತಿತ್ತು. ಹೀಗಾಗಿ ಕಾಟ ತಾಳಲಾರದೆ ಕೊಲೆ ಮಾಡಲು ನಿರ್ಧರಿಸಿದೆ. ಟಿವಿಯಲ್ಲಿ ಕ್ರೈಂ ಶೋ ನೋಡಿದ್ದರಿಂದ ಅದರಂತೆ ನಾನು ಮಾಡಿದೆ. ಬೇಸಿಗೆಯ ರಜಾ ದಿನಗಳಲ್ಲಿ ಅಜ್ಜಿಯ ಮನೆಗೆ ಹೋಗುತ್ತಿದ್ದೆ. ಆಗ ಟಿವಿಯಲ್ಲಿ ಹೆಚ್ಚು ಕ್ರೈಂ ಶೋಗಳನ್ನು ನೋಡುತ್ತಿದ್ದೆ. ಇದರಿಂದ ಪ್ರೇರಿತಳಾಗಿ ಸಹೋದರನನ್ನು ನದಿಯಲ್ಲಿ ಮುಳುಗಿಸಿ ಕೊಲ್ಲಲು ಯೋಜನೆ ರೂಪಿಸಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ.

ಅಲ್ಲದೆ ತಮ್ಮನಿಗೆ ಹಾಕಲು ನಿದ್ರೆ ಮಾತ್ರೆಗಳನ್ನು ಪಡೆಯುವಲ್ಲಿ ನಾವಿಬ್ಬರು ಯಶಸ್ವಿಯಾಗಿವು. ಮಾತ್ರೆಗಳನ್ನು ತಮ್ಮ ಕುಡಿಯುವ ಹಾಲಿನಲ್ಲಿ ಬೆರೆಸಿದೆವು. ಅಲ್ಲದೆ ಗಂಗಾನದಿಯಲ್ಲಿ ಮುಳುಗಿಸುವುದಕ್ಕೂ ಮುನ್ನ ತಮ್ಮನನ್ನು ನಿದ್ರಾಹೀನಗೊಳಿಸಿದ್ದೆವು. ಅವನು ನಿದ್ರೆಗೆ ಜಾರಿರುವುದು ಖಚಿತವಾಗುತ್ತಿದ್ದಂತೆ ನಾವಿಬ್ಬರು ಅವನನ್ನು ಚೀಲದಲ್ಲಿ ಹಾಕಿಕೊಂಡು ಸೈಕಲ್‍ನಲ್ಲಿ ಹೋಗಿ ಸುಮಾರು 800 ಮೀ. ದೂರದಲ್ಲಿದ್ದ ಗಂಗಾ ನದಿಗೆ ಹಾಕಿದೆವು. ನದಿಗೆ ಹಾಕಿ 20 ನಿಮಿಷಗಳ ನಂತರ ಮನೆಗೆ ಬಂದೆವು. ನಂತರ ಎಲ್ಲವೂ ಸಹಜವಾಗಿದೆ ಎಂಬಂತೆ ನಟಿಸಿದೆವು ಎಂದು ತಿಳಿಸಿದ್ದಾಳೆ.

ಘಟನೆ ನಡೆದ ಮರುದಿನ ಬೆಳಗ್ಗೆ ಮಗು ಕಾಣದಿರುವುದನ್ನು ಕಂಡು ಮನೆಯವರು ಗಾಬರಿಯಾಗಿ ಈ ಕುರಿತು ದೂರು ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಲು ಮುಂದಾದಾಗ, ಬಾಲಕಿಯು ಆರಂಭದಲ್ಲಿ ತನ್ನ ಚಿಕ್ಕಮ್ಮನ ಮೇಲೆ ಆರೋಪ ಹೊರಿಸಲು ಮುಂದಾಗಿದ್ದಳು. ಆದರೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಘಟನೆ ಕುರಿತು ಬಾಯ್ಬಿಟ್ಟಿದ್ದಾಳೆ.

Comments

Leave a Reply

Your email address will not be published. Required fields are marked *