ತನ್ನ ಮನೆಯನ್ನು ಕಂಚಿ ಮಠಕ್ಕೆ ದಾನ ಮಾಡಿದ ಎಸ್‍ಪಿಬಿ

ಹೈದರಾಬಾದ್: ಖ್ಯಾತ, ಬಹುಭಾಷಾ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ತಮ್ಮ ಮನೆಯನ್ನು ಕಂಚಿ ಮಠದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ ದಾನ ಮಾಡಿದ್ದಾರೆ.

ಈ ಹಿಂದೆ ಎಸ್‍ಪಿಬಿ ಅವರು ಆಂಧ್ರ ಪ್ರದೇಶದ ನೆಲ್ಲೂರ್ ನಲ್ಲಿರುವ ತಮ್ಮ ಮನೆಯನ್ನು ದಾನ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಕಂಚಿ ಮಠಕ್ಕೆ ಮನೆಯನ್ನು ದಾನ ಮಾಡಿದ್ದಾರೆ. ಆ ಮನೆಯಲ್ಲಿ ಸಂಸ್ಕೃತ ಹಾಗೂ ವೇದ ಪಾಠ ಶಾಲೆ ಮಾಡಬೇಕು ಎಂಬುದು ಎಸ್‍ಪಿಬಿ ಅವರ ಆಸೆ ಎಂದು ತಿಳಿದು ಬಂದಿದೆ.

ದೇವರ ಹಾಗೂ ಧಾರ್ಮಿಕ ವಿಚಾರಗಳ ಬಗ್ಗೆ ಎಸ್‍ಪಿಬಿ ಅವರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅಲ್ಲದೆ ಎಸ್‍ಪಿಬಿ ಅವರಿಗೆ ಸಂಸ್ಕೃತ ಮೇಲೆ ಸಾಕಷ್ಟು ಪ್ರೀತಿ ಇದೆ. ಹಾಗಾಗಿ ಒಂದು ಒಳ್ಳೆಯ ಉದ್ದೇಶಕ್ಕಾಗಿ ಎಸ್‍ಪಿಬಿ ತಮ್ಮ ಮನೆಯನ್ನು ದಾನ ಮಾಡಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಎಸ್‍ಪಿ ಬಾಲಸುಬ್ರಮಣ್ಯಂ ಅವರು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಅತಿ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಎಸ್‍ಪಿಬಿ ಒಟ್ಟು 16 ಭಾಷೆಯಲ್ಲಿ 40,000 ಹಾಡನ್ನು ಹಾಡಿದ್ದಾರೆ. ಸಿನಿಮಾಗಳಲ್ಲಿ ಅತಿ ಹೆಚ್ಚು ಹಾಡನ್ನು ಹಾಡಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.

ಎಸ್‍ಪಿಬಿ ಅವರಿಗೆ ಅತ್ಯುತ್ತಮ ಗಾಯಕನಾಗಿ ಒಟ್ಟು 6 ನ್ಯಾಷನಲ್ ಫಿಲ್ಮ್ ಪ್ರಶಸ್ತಿ ಬಂದಿದೆ.  ಬಾಲಿವುಡ್ ಹಾಡುಗಳಿಗೂ ಕೂಡ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *