ಕನ್ನಡಕ್ಕೂ ನಂಟು ಹೊಂದಿದ್ದರು ಅಗಲಿದ ಖ್ಯಾತ ಗಾಯಕ ಕೆಕೆ

ನಿನ್ನೆ ಕೋಲ್ಕತ್ತಾ ಕಾರ್ಯಕ್ರಮದಲ್ಲಿ ರಂಜಿಸುತ್ತಿದ್ದ ಬಾಲಿವುಡ್ ಖ್ಯಾತ ಗಾಯಕ ಕೆಕೆ, ನಂತರ ಹೃದಯಾಘಾತದಿಂದ ನಿಧನರಾದ ಸುದ್ದಿ ಸಂಗೀತ ಲೋಕಕ್ಕೆ ಆಘಾತವುಂಟು ಮಾಡಿದೆ. ಹಿಂದಿ, ತೆಲುಗು, ಕನ್ನಡ, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ನೂರಾರು ಗೀತೆಗಳನ್ನು ಹಾಡಿದ ಇವರು, ಕನ್ನಡದಲ್ಲೂ 15ಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿದ್ದಾರೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

ಕನ್ನಡದ ‘ಲವ್’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟವರು ಕೆಕೆ. ಆದಿತ್ಯ ಮತ್ತು ರಕ್ಷಿತಾ ನಟನೆಯ ಚಿತ್ರ ಇದಾಗಿದ್ದು, ಅನು ಮಲಿಕ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ‘ಏಳು ಬಣ್ಣಗಳು’ ಕೆಕೆ ಧ್ವನಿಯಲ್ಲಿ ಮೂಡಿ ಬಂದ ಹಾಡಾಗಿದೆ. ಮೊದಲ ಗೀತೆಯಲ್ಲೇ ಕನ್ನಡದ ಕಿವಿಗಳನ್ನು ತಂಪಾಗಿಸಿದರು. ನಂತರ  ರೌಡಿ ಅಳಿಯ, ಸಾರ್ವಭೌಮ, ನ್ಯೂಸ್, ಮದನ, ಪರಿಚಯ, ಮನಸಾರೆ, ಮಳೆ ಬರಲಿ ಮಂಜು ಇರಲಿ, ಯೋಗಿ, ಸಂಚಾರಿ, ಬಹುಪರಾಕ್, ಆರ್ಯನ್ ಸಿನಿಮಾಗಳಿಗೂ ಇವರು ಹಾಡಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ಯುವಕರನ್ನು ಹುಚ್ಚೆಬ್ಬಿಸಿದ್ದ ‘ಪರಿಚಯ’ ಸಿನಿಮಾದ ‘ನಡೆದಾಡುವ ಕಾಮನ ಬಿಲ್ಲು’ ಗೀತೆ ಕೂಡ ಕೆಕೆ ಅವರ ಕಂಠ ಸಿರಿಯಲ್ಲಿ ಮೂಡಿ ಬಂದಿದೆ. ಅಲ್ಲದೇ,  ಶಿವರಾಜ್ ಕುಮಾರ್ ಮತ್ತು ರಮ್ಯಾ ಕಾಂಬಿನೇಷನ್ ನ, ಜಸ್ಸಿ ಗಿಫ್ಟ್ ಸಂಗೀತ ಸಂಯೋಜನೆಯ ‘ಒಂದು ಹಾಡು ಮೆಲ್ಲ ಕೇಳಿ’ ಗೀತೆಯನ್ನೂ ಕೆಕೆ ಹಾಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಚಿತ್ರಕ್ಕಾಗಿ ಕಣ್ಣ ಹನಿಯೊಂದಿಗೆ ಗೀತೆ, ನ್ಯೂಸ್ ಸಿನಿಮಾಗಾಗಿ ಗಿರ ಗಿರ ಗೀತೆಗಳನ್ನು ಕೆಕೆ ಹಾಡಿದ್ದಾರೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

ಕೆಕೆ ಮೂಲತಃ ಮಲಯಾಳಿ ಕುಟುಂಬದವರು. ಹುಟ್ಟಿದ್ದು ದೆಹಲಿಯಲ್ಲಿ. ಹೊಟೇಲ್ ಉದ್ಯಮದಲ್ಲಿ ಮಾರ್ಕೆಟಿಂಗ್ ಅಸೋಷಿಯೇಟ್ ಆಗಿದ್ದವರು, ಸಂಗೀತದ ಮೇಲಿನ ಆಸಕ್ತಿಯಿಂದಾಗಿ ಮೊದ ಮೊದಲು ಜಿಂಗಲ್ಸ್ ಗೆ ಹಾಡೋಕೆ ಶುರು ಮಾಡಿದರು. ಈ ವೃತ್ತಿಯಲ್ಲೇ ಅಪಾರ ಸಾಧನೆ ಕೂಡ ಮಾಡಿದವರು. 11 ಭಾಷೆಗಳಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ಜಿಂಗಲ್ಸ್ ಗೆ ಇವರು ಹಾಡಿದ್ದಾರೆ. ನಂತರ ಸಿನಿಮಾ ರಂಗ ಪ್ರವೇಶ ಮಾಡಿದರು. 1999ರಲ್ಲಿ ತೆರೆಕಂಡ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದ ಹಾಡುಗಳು ಹಿಟ್ ಆಗುತ್ತಿದ್ದಂತೆಯೇ ಕೆಕೆ ಎಲ್ಲರ ಫೇವರಿಟ್ ಗಾಯಕ ಅನಿಸಿಕೊಂಡರು.

ಹಿಂದಿಯಲ್ಲೇ ಐನೂರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಕೆಕೆ, ಮೂಲ ಮಲಯಾಳಿಯಾದರೂ, ಆ ಭಾಷೆಯಲ್ಲಿ ಹಾಡಿದ ಸಂಖ್ಯೆ ಕೇವಲ ಒಂದೇ ಒಂದು. ಹಲವು ಭಾಷೆಗಳು ಸೇರಿ ಏಳು ನೂರಕ್ಕೂ ಹೆಚ್ಚಿ ಗೀತೆಗಳನ್ನು ಈವರೆಗೂ ಕೆಕೆ ಸಿನಿಮಾಗಾಗಿ ಹಾಡಿದ್ದಾರೆ.

Comments

Leave a Reply

Your email address will not be published. Required fields are marked *