ಸಿದ್ಧಾರ್ಥ್ ನನ್ನ ಅನೇಕ ಹಿಂಬಾಲಕರಿಗೆ ಕಾಫಿ ಡೇಯಲ್ಲಿ ಕೆಲಸ ಕೊಟ್ಟಿದ್ದಾರೆ: ಜಗ್ಗೇಶ್

ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ಅವರು ನನ್ನ ಅನೇಕ ಹಿಂಬಾಲಕರಿಗೆ ಕಾಫಿ ಡೇಯಲ್ಲಿ ಕೆಲಸ ಕೊಟ್ಟಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ನವರಸನಾಯಕ ಜಗ್ಗೇಶ್ ಅವರು ಸಂತಾಪ ಸೂಚಿಸಿದ್ದಾರೆ.

ಜಗ್ಗೇಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ನನ್ನ ಗುರುಗಳು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಂದ ಪರಿಚಯವಾದ ಮಹೋದಯ. ನಾನು 2004 ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಹುಡುಕಿ ಬಂದು ಚುನಾವಣೆಗೆ ಸಹಾಯ ಮಾಡಿ ಹೋದರು. ಅನೇಕ ಬಾರಿ ದೂರವಾಣಿ ಕರೆ ಮಾಡಿ ನನ್ನ ವಿನಂತಿಗೆ ನನ್ನ ಅನೇಕ ಹಿಂಬಾಲಕರಿಗೆ ಕಾಫಿ ಡೇ ಅಲ್ಲಿ ಕೆಲಸ ಕೊಟ್ಟವರು. ನನ್ನ ಗುರುಗಳು ಎಸ್.ಎಂ ಕೃಷ್ಣ ಹಾಗೂ ಅವರ ಕುಟುಂಬಕ್ಕೆ ಈ ನೋವು ಅರಗಿಸುವ ಶಕ್ತಿ ರಾಯರು ನೀಡಲಿ. ಓಂ ಶಾಂತಿ” ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೆ ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕೂಡ ತಮ್ಮ ಟ್ವಿಟ್ಟರಿನಲ್ಲಿ, “ನಮ್ಮ ಮಂಡ್ಯ ಜಿಲ್ಲೆಯವರಾದ ಶ್ರೀ ಎಸ್.ಎಂ.ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ್ ಅವರ ಸಾವು ತೀವ್ರ ಆಘಾತ ತಂದಿದೆ. ಎಸ್.ಎಂ ಕೃಷ್ಣ ಅವರಿಗೂ ಹಾಗೂ ಅವರ ಕುಟುಂಬದವರಿಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಸಿದ್ಧಾರ್ಥ್ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಸೋಮವಾರ ರಾತ್ರಿ ಮಂಗಳೂರು ಕಾಸರಗೋಡು ಹೆದ್ದಾರಿ ಮಧ್ಯೆ ಇರುವ ಜಪ್ಪಿನಮೊಗರು ಎಂಬಲ್ಲಿ ಸೇತುವೆಯಿಂದ ಸಿದ್ಧಾರ್ಥ್ ನದಿಗೆ ಹಾರಿದ್ದರು. ಸುಮಾರು 36 ಗಂಟೆಗಳ ಶೋಧ ಕಾರ್ಯದ ನಂತರ ಇಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ಸಿದ್ಧಾರ್ಥ್ ಶವ ದೊರೆತಿದೆ.

Comments

Leave a Reply

Your email address will not be published. Required fields are marked *