ವಿಶ್ವಾಸಮತ ಮುಂದೂಡಿಕೆಯಾದ್ರೆ ನಾನೇ ಹೊರ ನಡೆಯುತ್ತೇನೆ: ಸಿದ್ದರಾಮಯ್ಯ ಎಚ್ಚರಿಕೆ

ಬೆಂಗಳೂರು: ಇವತ್ತೇ ವಿಶ್ವಾಸ ಮತ ಸಾಬೀತು ಪಡಿಸೋಣ. ಒಂದು ವೇಳೆ ಇಂದು ವಿಶ್ವಾಸಮತ ಸಾಬೀತು ಮುಂದೂಡಿಕೆಯಾದರೆ ನಾನೇ ಸದನದಿಂದ ಹೊರ ನಡೆಯುತ್ತೇನೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ಸಿದ್ದರಾಮಯ್ಯ ಸಿಎಂಗೆ ರವಾನಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಡಿಸಿಎಂ ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಮೂಲಕ ಸಿಎಂಗೆ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸುಪ್ರೀಂ ನಮ್ಮ ಪರವಾಗಿ ಆದೇಶ ನೀಡಿದರೆ ಅದಕ್ಕೆ ನನ್ನದೇನು ತಕರಾರಿಲ್ಲ. ಆದರೆ ಕೋರ್ಟ್ ಆದೇಶ ನಮ್ಮ ಪರವಾಗಿ ಬಾರದೇ ಸುಮ್ಮನೆ ನಾಳೆಗೆ ವಿಶ್ವಾಸಮತ ಸಾಬೀತು ಮಾಡುವುದಕ್ಕೆ ದಿನ ದೂಡಲು ಮುಂದಾದರೆ ನಾನೇ ಸದನದಿಂದ ಹೊರ ನಡೆಯುತ್ತೇನೆ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರಿಗೆ ತಿಳಿಸಿದ್ದಾರೆ.

ಇಷ್ಟರಲ್ಲೇ ನಾವು ಬಹುಮತ ಸಾಬೀತು ಪಡಿಸಬೇಕಿತ್ತು. ಆದರೆ ಸಿಎಂ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ನಾನು ಸೋಮವಾರ ಬಹುಮತ ಸಾಬೀತು ಮಾಡುತ್ತೇನೆ ಎಂದು ಶುಕ್ರವಾರವೇ ಸದನದಲ್ಲಿ ಸ್ಪಷ್ಟವಾಗಿ ಹೇಳಿದ್ದೆ. ಸಿಎಂ ಒಪ್ಪಿಗೆ ಮೇರೆಗೆ ನಾನು ಸದನದಲ್ಲಿ ಈ ಮಾತನ್ನು ಆಡಿದ್ದೆ. ಸ್ವತಃ ಕುಮಾರಸ್ವಾಮಿಯವರೇ ಸೋಮವಾರ ವಿಶ್ವಾಸ ಮತಯಾಚಿಸುವುದಾಗಿ ತಿಳಿಸಿದ್ದರು. ಆದರೆ ನಿನ್ನೆ ಸಿಎಂ ಉಲ್ಟಾ ಹೊಡೆದು ಬಿಟ್ಟಿದ್ದರೆ. ರಾತ್ರಿಯಿಡೀ ಚರ್ಚೆ ನಡೆದರೂ ಮತ್ತೆ ಮುಂದೂಡಿಕೆಯಾಗಿದ್ದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಮೈತ್ರಿ ಅನಿವಾರ್ಯತೆಗೆ ನಿನ್ನೆ ಸ್ಪೀಕರ್ ಮನವೊಲಿಕೆಗೂ ಮುಂದಾಗಿದ್ದೆ. ಆದರೆ ಶುಕ್ರವಾರ ನಾನು ನುಡಿದ ಮಾತಿನಂತೆ ನಡೆಯದೇ ತಪ್ಪು ಮಾಡಿದ್ದೇನೆ ಎಂದು ಆಪ್ತರ ಬಳಿ ಸಿದ್ದರಾಮಯ್ಯ ಬೇಸರದಿಂದ ಹೇಳಿಕೊಂಡಿದ್ದಾರೆ.

ಸೋಮವಾರ ರಾತ್ರಿ ನಾನೇ ಸದನಕ್ಕೆ ಮಾತುಕೊಟ್ಟಿದ್ದೇನೆ. ಇಂದು ಈ ಮಾತಿನಂತೆ ನಡೆಯದೇ ಇದ್ದರೆ ನಾನು ತಲೆ ಅಡಿ ಹಾಕಬೇಕಾಗುತ್ತದೆ. ಯಾವ ಕಾರಣಕ್ಕೂ ಇವತ್ತು ಮಾತು ತಪ್ಪಬಾರದು. ಬಹುಮತ ಸಾಬೀತಿಗೆ ಮುಂದಾಗಲೇಬೇಕು ಎಂದು ಖಡಕ್ಕಾಗಿ ಸಿದ್ದರಾಮಯ್ಯ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *