ನೀವು ಬಿಟ್ಟರೂ 40% ಕರ್ಮ ನಿಮ್ಮನ್ನ ಹಿಂಬಾಲಿಸುತ್ತಿದೆ ಮೋದಿಜೀ – ಟ್ವೀಟ್‌ನಲ್ಲಿ ಕಾಲೆಳೆದ ಸಿದ್ದು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೃಹತ್ ರೋಡ್ ಶೋ (Road Show) ಯಶಸ್ವಿಯಾಗಿ ಸಂಪನ್ನಗೊಂಡಿದೆ.

ಈ ನಡುವೆ ಪ್ರಧಾನಿ ರೋಡ್‌ ಶೋ ವೇಳೆ ಕ್ಲಿಕ್ಕಿಸಿದ ಫೋಟೋವೊಂದು‌ ಪ್ರತಿಪಕ್ಷ ನಾಯಕರಿಂದ ಟೀಕೆಗೆ ಅಸ್ತ್ರವಾಗಿದೆ. ಪ್ರಧಾನಿ ರೋಡ್‌ಶೋ ವೇಳೆ ಕ್ಲಿಕ್ಕಿಸಿದ ಫೋಟೋವೊಂದರಲ್ಲಿ ಮಳಿಗೆಯ ಮೇಲೆ 40% ಆಫರ್‌ ಇರುವ ಪೋಸ್ಟರ್‌ ಕಂಡುಬಂದಿದೆ. ಈ ಫೋಟೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ (Siddaramaiah) ʻನೀವು ಬಿಟ್ಟರೂ 40% ಕರ್ಮ ನಿಮ್ಮನ್ನು ಬಿಡದೆ ಹಿಂಬಾಲಿಸುತ್ತಿದೆ ಮೋದಿಜೀʼ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಡಿಜಿಟಲ್‌ ಮೀಡಿಯಾ ಹವಾ ಹೇಗಿದೆ?

ಇದರೊಂದಿಗೆ ಕನ್ನಡಿಗರ ಮತಕ್ಕಿರುವ ಬೆಲೆ ಬದುಕಿಗಿಲ್ಲವೇ? ಘೋಷಣೆಯೊಂದಿಗೆ ಹಲವು ಪ್ರಶ್ನೆಗಳನ್ನು ಪ್ರಧಾನಿ ಮೋದಿ ಅವರಿಗೆ ಕೇಳಿದ್ದಾರೆ. ಗ್ರಾಮೀಣ ಬ್ಯಾಂಕಿಂಗ್‌, ಐಬಿಪಿಎಸ್‌, ಕೇಂದ್ರ ಸ್ವಾಮ್ಯದ ಸಂಸ್ಥೆಗಳ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ನಿರಾಕರಿಸಿ ಹುಟ್ಟಿದ ನೆಲದಲ್ಲಿಯೇ ಕನ್ನಡಿಗ ಯುವಜನರಿಗೆ ಉದ್ಯೋಗ ವಂಚನೆ ಮಾಡಲಾಗಿದೆ. ಇವರು ಪ್ರತಿಭಟನೆ ನಡೆಸುವಾಗ ನ್ಯಾಯ ಕೊಡಿಸಲು ನೀವು ಯಾಕೆ ಬಂದಿರಲಿಲ್ಲ? ಇದನ್ನೂ ಓದಿ: ಮೇ7ರಂದು ಬೆಂಗಳೂರಿನಲ್ಲಿ ಮೋದಿ ಫೈನಲ್‌ ರೋಡ್‌ ಶೋ

ಕಳೆದ 4 ಬಜೆಟ್‌ಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಶೇ.1.97ಕ್ಕಿಂತ ಮೇಲೆ ಏರಿಲ್ಲ. 2022ರಲ್ಲಿ ಸಿಎಜಿ ವರದಿ ಪ್ರಕಾರ 2022ರಲ್ಲಿ 1.62 ಲಕ್ಷ ವಿದ್ಯಾರ್ಥಿಗಳು ಶಾಲೆಗಳನ್ನ ತ್ಯಜಿಸಿದ್ದಾರೆ. 2020-21 ಮತ್ತು 2021-22ರ ಅವಧಿಯಲ್ಲಿ 1,965 ಸರ್ಕಾರಿ ಶಾಲೆಗಳನ್ನ ಮುಚ್ಚಲಾಗಿದೆ. ಶಿಕ್ಷಣವಂಚಿತ ಮಕ್ಕಳ ಭವಿಷ್ಯ ಹಾಳಾಗುವಾಗ ನ್ಯಾಯ ಕೊಡಿಸಲು ನೀವು ಏಕೆ ಬಂದಿರಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನ ಪ್ರಧಾನಿ ಮುಂದಿಟ್ಟಿದ್ದಾರೆ.