ಮೋದಿ ವಿರುದ್ಧ ಪ್ರತಿಭಟನೆಗಿಳಿದ ದೋಸ್ತಿ

– ‘ಜೋಡೆತ್ತು’ಗಳಿಗೆ ‘ಟಗರು’ ಸಾಥ್
– ಮಾನಸಿಕ ಖಿನ್ನತೆಗೆ ಒಳಗಾದವರ ಮೇಲೆಯೇ ಯಾಕೆ ಐಟಿ ದಾಳಿ?
– ಸಿಆರ್‌ಪಿಎಫ್ ನೆರವು ಪಡೆದಿದ್ದು ಯಾಕೆ- ಎಚ್‍ಡಿಕೆ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಪ್ರೇರಿತ ಐಟಿ ದಾಳಿ ನಡೆಯುತ್ತಿದೆ ಎಂದು ಆರೋಪಿಸಿ ಮೈತ್ರಿ ಸರ್ಕಾರದ ನಾಯಕರು ಸೇರಿದಂತೆ ನೂರಾರು ಕಾರ್ಯಕರ್ತರು ನಗರದ ಆದಾಯ ತೆರಿಗೆ ಇಲಾಖೆ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ, ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಬೆಂಬಲಕ್ಕೆ ನಿಂತ ಮುಖಂಡರ ಮೇಲೆ ಐಟಿ ದಾಳಿ ಮಾಡಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಿಲ್ಲ. ನೀವು ಯಾಕೆ ಅವರ ಕೈಗೊಂಬೆ ರೀತಿ ಆಡುತ್ತಿರುವಿರಿ? ಚುನಾವಣೆ ಸಮಯದಲ್ಲಿ ಈ ರೀತಿ ಐಟಿ ದಾಳಿ ಮಾಡುವುದು ಸರಿಯಲ್ಲ. ರಾಜ್ಯದಲ್ಲಿ ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನೇ ಟಾರ್ಗೆಟ್ ಮಾಡುತ್ತಿರುವಿರಿ. ಎಂದು ಐಟಿ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಬಿಜೆಪಿಗೆ ಸೋಲಿನ ಭಯವಿದೆ. ಹೀಗಾಗಿ ಕೇಂದ್ರ ಸರ್ಕಾರವು ಐಟಿ ಅಧಿಕಾರಿಗಳ ಮೂಲಕ ರಾಜ್ಯ ಕಾಂಗ್ರೆಸ್, ಜೆಡಿಎಸ್ ನಾಯಕರ ಮನೆಯ ಮೇಲೆ ದಾಳಿ ಮಾಡುತ್ತಿದೆ. ಆದರೆ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಸಿಎಂ ಗುಡುಗಿದರು. ಈ ವೇಳೆ ಪ್ರತಿಭಟನಾನಿರತ ಕೆಲವರು ಮೋದಿ ಚೋರ್, ಚೌಕಿದಾರ್ ಜೋರ್ ಹೈ ಎಂದು ಕೂಗಿದರು.

ಡಿಸಿಎಂ ಜಿ.ಪರಮೇಶ್ವರ್ ಮಾತನಾಡಿ, ಬಿಜೆಪಿಯವರು ದೇಶದ ಒಕ್ಕೂಟದ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯು ಐಟಿ, ಸಿಬಿಐ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಿದ್ದು, ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಸಿಎಂ ಕುಮಾರಸ್ವಾಮಿ ಅವರು ಮಾತನಾಡಿ, ಐಟಿ ದಾಳಿಯ ಬಗ್ಗೆ ನಮ್ಮ ವಿರೋಧವಿಲ್ಲ. ಕೆಲವೇ ಕೆಲವು ಪಕ್ಷದ ಮುಖಂಡರು, ಕಾರ್ಯಕರ್ತರ ಮನೆಯ ಮೇಲೆ ದಾಳಿ ಮಾಡುತ್ತಿರುವುದು ಸರಿಯಲ್ಲ. ವಿರೋಧ ಪಕ್ಷದ ಕಾರ್ಯಕರ್ತರಲ್ಲಿ ಭಯ ಮೂಡಿಸಲು ಬಿಜೆಪಿಯವರು ಇಂತಹ ತಂತ್ರ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಐಟಿ ಇಲಾಖೆಯ ಅಧಿಕಾರಿಯೊಬ್ಬರು ಮುಂಬೈನಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸಂಪಾದನೆ ಮಾಡಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಐಟಿ ಅಧಿಕಾರಿಗಳು ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುವುದನ್ನು ಬಿಡಬೇಕು ಎಂದು ತಿಳಿಸಿದರು.

ಸಾಮಾನ್ಯವಾಗಿ ಐಟಿ ಅಧಿಕಾರಿಗಳು ಆಯಾ ರಾಜ್ಯಗಳ ಪೊಲೀಸರ ನೆರವು ಪಡೆದು ದಾಳಿ ಮಾಡುತ್ತಾರೆ. ಆದರೆ ಇಂದು ಸಿಆರ್‌ಪಿಎಫ್ ಯೋಧರ ನೆರವು ಪಡೆದು ದಾಳಿ ಮಾಡಿದ್ದೀರಿ. ಯಾವ ಉದ್ದೇಶಕ್ಕಾಗಿ ಹೀಗೆ ಮಾಡಿದ್ದು ಎನ್ನುವುದಕ್ಕೆ ಉತ್ತರ ನೀಡಬೇಕು ಎಂದು ಸಿಎಂ ಕುಮಾರಸ್ವಾಮಿ ಆಗ್ರಹಿಸಿದರು.

ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಬಿಜೆಪಿಯ ಒತ್ತಡದ ಮೇಲೆ ಕೇಂದ್ರ ಸಂಸ್ಥೆಯ ಅಧಿಕಾರಿಗಳು ಕೆಲಸ ಮಾಡಬಾರದು. ಬಿಜೆಪಿ ಕೇಂದ್ರದಲ್ಲಿ ಶಾಶ್ವತವಾಗಿ ಇರುವುದಿಲ್ಲ. ಭಾರತದ ಇತಿಹಾಸದಲ್ಲಿಯೇ ಐಟಿ ಅಧಿಕಾರಿಗಳು ರ್ನಾಟನಕದಲ್ಲಿ ಎರಡು ಬಾರಿ ಸಿಆರ್‌ಪಿಎಫ್ ನೆರವು ಪಡೆದು ದಾಳಿ ಮಾಡಿದ್ದಾರೆ. ಈ ಹಿಂದೆ ನನ್ನ ಮನೆಯ ಮೇಲೆ ದಾಳಿ ಮಾಡಿದ್ದಾಗ ಸಿಆರ್‍ಪಿಎಫ್ ಯೋಧರನ್ನು ಕರೆತಂದಿದ್ದರು. ಇಂದು ಕೂಡ ಅದೇ ರೀತಿ ನಡೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

Comments

Leave a Reply

Your email address will not be published. Required fields are marked *