ಸಿಎಂ ಬಿಎಸ್‍ವೈರನ್ನ ‘ಏಕಚಕ್ರಾಧಿಪತಿಗಳೇ’ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ

ಬೆಂಗಳೂರು: ಮೈತ್ರಿ ಸರ್ಕಾರ ಉರುಳಿದ ಬಳಿಕ ಸರ್ಕಾರ ರಚನೆ ಮಾಡಿದ್ದ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿಯನ್ನು ಮುಂದುವರಿಸಿದ್ದು, ಬಿಎಸ್‍ವೈರನ್ನ ಏಕಚಕ್ರಾಧಿಪತಿಗಳೇ ಎಂದು ಕರೆದು ವ್ಯಂಗ್ಯವಾಡಿದ್ದಾರೆ.

ಮೈಸೂರು ಹಾಲು ಒಕ್ಕೂಟದ ಅಧಿಕಾರೇತರ ಸದಸ್ಯರಾಗಿ ಬಿಎಸ್‍ವೈ ಸಂಬಂಧಿಗಳನ್ನ ನೇಮಕ ಮಾಡಿರುವ ಬಗ್ಗೆ ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ ಅವರು, ಕೆಎಂಎಫ್‍ಗೆ ಸಂಬಂಧಿಕರನ್ನು ನೇಮಿಸುವ ಬದಲು ಸಂಪುಟ ರಚನೆ ಮಾಡಿದ್ದರೆ ಪ್ರವಾಹ ಪರಿಸ್ಥಿತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎದುರಿಸಬಹುದಿತ್ತಲ್ಲವೇ ಏಕ್ರಚಕ್ರಾಧಿಪತಿಗಳೇ ಎಂದು ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರನ್ನು ಪ್ರಶ್ನಿಸಿರುವ ಅವರು, ಸಂಪುಟ ಸದಸ್ಯರ ಅನುಮೋದನೆಗೆ ಸಮಯವಿಲ್ಲದ ನಿಮ್ಮ ಹೈಕಮಾಂಡ್, ಕೆಎಂಎಫ್‍ಗೆ ಸದಸ್ಯರನ್ನ ನೇಮಕಕ್ಕೆ ಆದ್ಯತೆ ನೀಡಲು ಹೇಳಿತ್ತೆ ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ಟ್ವೀಟ್‍ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಯನ್ನು ಪ್ರಸ್ತಾಪ ಮಾಡಿರುವ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದ ಜನ ಪ್ರವಾಹದಿಂದ ತತ್ತರಿಸುತ್ತಿರುವುದನ್ನು ರಾಜ್ಯದ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ತಿಳಿಸಿ ನೆರವಿಗೆ ಮೊರೆ ಇಡಬೇಕೆಂತೆ? ಇದು ನಿಮ್ಮ ಸನ್ಮಾನ್ಯ ಮೋದಿ ಅವರ ಸಬ್‍ಕ ಸತ್ ಸಬ್ ವಿಕಾಸ್ ಸರ್ಕಾರ ಎಂದು ಟೀಕೆ ಮಾಡಿದ್ದಾರೆ. ಜೋಶಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ರಾಜ್ಯ ಸರ್ಕಾರ ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಗಳಲ್ಲಿ ಜನರ ರಕ್ಷಣೆಗೆ ಹಾಗೂ ಪರಿಹಾರ ಕಾರ್ಯ ಕೈಗೊಳ್ಳಲು ಯಾವ ರೀತಿಯ ನೆರವು ಬೇಕು ಎಂದು ತಿಳಿಸಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಸಿದ್ದರಾಮಯ್ಯ ಅವರು ಜೋಶಿ ವಿರುದ್ಧ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *