ನಾನು ಬಾದಾಮಿಯಲ್ಲಿ ಸ್ಪರ್ಧೆ ಮಾಡ್ತೀನಿ ಅಂತ ಹೇಳೇ ಇರಲಿಲ್ಲ: ಸಿಎಂ

ಬೆಂಗಳೂರು: 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದೇವೆ. 5 ಕ್ಷೇತ್ರದಲ್ಲಿ ಮಾತ್ರ ಟಿಕೆಟ್ ಫೈನಲ್ ಮಾಡಿಲ್ಲ. 2-3 ದಿನದಲ್ಲಿ ಉಳಿದ ಕ್ಷೇತ್ರಗಳ ಟಿಕೆಟ್ ಬಿಡುಗಡೆ ಮಾಡುತ್ತೇವೆ. ಯಾವುದೇ ಬಂಡಾಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯಗೆ ಬಿಟ್ಟುಕೊಟ್ಟಿದ್ದೇವೆ. ತಿಪಟೂರಿನಲ್ಲಿ ಷಡಕ್ಷರಿಗೆ ಕರೆದು ಮಾತನಾಡುತ್ತೇನೆ. ಬಿಬಿ ಚಿಮ್ಮನಕಟ್ಟಿ ಜೊತೆಯೂ ಮಾತನಾಡಿದ್ದೇನೆ. ಹ್ಯಾರಿಸ್ ಗೆ ಎರಡು ದಿನದಲ್ಲಿ ಟಿಕೆಟ್ ಸಿಗುತ್ತೆ ಅನ್ನೋ ಭರವಸೆ ಇದೆ. ಯಾವುದೇ ಬಂಡಾಯ ಇಲ್ಲ. ಸರ್ವೇ ಆಧಾರದ ಮೇಲೆ ಟಿಕೆಟ್ ನೀಡಿದ್ದೇವೆ. ನಾನು ಯಾವತ್ತು ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಕುಮಾರಸ್ವಾಮಿ ಸಿಎಂ, ಜಿಟಿ ದೇವೇಗೌಡ ಮೈಸೂರು ಉಸ್ತುವಾರಿ ಆಗ್ತಾರೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಜೆಡಿಎಸ್ ನವರು ಬಂದ್ರೆ ತಾನೆ ಎಲ್ಲಾ ಆಗೋದು ಅವ್ರು ಅಧಿಕಾರಕ್ಕೆ ಬರೋದಿಲ್ಲ ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಖಚಿತವಾದ ಮರುದಿನವೇ ಸಿಎಂ ಪ್ರಚಾರ ಕಾರ್ಯದಲ್ಲಿ ಮುಂದಾಗಿದ್ದಾರೆ. ಇಂದಿನಿಂದ 4 ದಿನಗಳ ಕಾಲ ತನ್ನ ಕ್ಷೇತ್ರದ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಸಿಎಂ ತಮ್ಮ ಪುತ್ರ ಯತೀಂದ್ರ ಜೊತೆ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದು ತಿಳಿದು ಬಂದಿದೆ.

ಸಾಕಷ್ಟು ಟಿಕೆಟ್ ಗೊಂದಲ ಆಗಿದೆ. 16 ಜನರಿಗೆ ಟಿಕೆಟ್ ಸಿಕ್ಕಿಲ್ಲ. ಸಣ್ಣಪುಟ್ಟ ಗೊಂದಲ ಇದೆ. ಬಿಜೆಪಿಯಲ್ಲಿ ಇಲ್ವ ಜೆಡಿಎಸ್ ಅಲ್ಲಿ ಇಲ್ವ. ಅವೆರಡಕ್ಕೂ ಹೋಲಿಸಿದರೆ ನಮ್ಮದು ಪರವಾಗಿಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ಹೇಳಿದ್ದಾರೆ.

ಗೆಲ್ಲುವ ದೃಷ್ಟಿಯಿಂದ ಟಿಕೆಟ್ ಹಂಚಿಕೆ ಮಾಡಿದ್ದೇವೆ. ಉಳಿದಿರುವ ಟಿಕೆಟ್ ಹಂಚಿಕೆ ಮಾಡ್ತೇವೆ. ಬಿಜೆಪಿ ಅವರು ನೂರಕ್ಕೆ ನೂರು ಭಾಗ ಹಿಂದೆ ಇದ್ದಾರೆ. 79 ಸೀಟು ಮಾತ್ರ ಹಂಚಿಕೆ ಮಾಡಿದ್ದಾರೆ. ಹಂಚಿಕೆ ಮಾಡಿದ ಮೇಲೆ ಬಿಜೆಪಿಯಲ್ಲೂ ಗಲಾಟೆ ಆಗುತ್ತೆ. ನನ್ನ ಮಗಳು ಅಂತಾ ಅಲ್ಲ ಓಪೀನಿಯನ್ ತಗೊಂಡು ಟಿಕೆಟ್ ಕೊಟ್ಟಿದಾರೆ. ನನ್ನ ಹಳೇ ಕ್ಷೇತ್ರ ಜಯನಗರ, ಯೂತ್ ಕಾಂಗ್ರೆಸ್ ಕೋಟಾ ಎಲ್ಲಾ ಸೇರಿ ಟಿಕೆಟ್ ಕೊಟ್ಟಿದ್ದಾರೆ. ನನ್ನ ಮಗಳು ಗೆಲ್ಲುತ್ತಾಳೆ ಎಂದು ತಿಳಿಸಿದರು.

ಬಾದಾಮಿ ಬಿ ಫಾರಂ ನನಗೆ ಸಿಗುತ್ತದೆ. ಸಿಎಂ ಜತೆ ಚರ್ಚೆ ಮಾಡಿದ್ದೀನಿ. ಸಿಎಂ ಬಾದಾಮಿ ಅಭ್ಯರ್ಥಿಯಾಗಿದ್ರೆ ಕ್ಷೇತ್ರ ಬಿಟ್ಟು ಕೊಡುತ್ತಿದ್ದೆ. ಆದ್ರೆ ಸದ್ಯ ದೇವರಾಜ್ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆ ಎಂದು ಟಿಕೆಟ್ ವಂಚಿತ ಬಾದಾಮಿ ಶಾಸಕ ಬಿಬಿ ಚಿಮ್ಮನಕಟ್ಟಿ ಹೇಳಿದ್ದಾರೆ.

ನಾನು 5 ಬಾರಿ ಶಾಸಕನಾಗಿದ್ದೀನಿ. 6 ನೇ ಬಾರಿಯೂ ನಾನು ಶಾಸಕನಾಗಿ ಗೆಲ್ಲುವೆ. ಕಾಂಗ್ರೆಸ್ ಟಿಕೆಟ್ ಕೊಡುತ್ತೆ ಅಂತ ಸಿಎಂ ಭರವಸೆ ಕೊಟ್ಟಿದ್ದಾರೆ. ಮುಂದಿನ 2 ದಿನ ಕಾದು ನೋಡಿ, ಮತ್ತೆ ನಾನೇ ಟಿಕೆಟ್ ತಗೊಂಡು ಶಾಸಕನಾಗುವೆ. ಟಿಕೆಟ್ ನನಗೆ ಸಿಗುತ್ತೆ. ನನ್ನ ಆರೋಗ್ಯ ಸರಿಯಾಗಿದೆ. ಆರೋಗ್ಯ ಸರಿ ಇಲ್ಲ ಅನ್ನೋದು ಸುಳ್ಳು. ನಾನು ಆರೋಗ್ಯವಾಗಿದ್ದೀನಿ ಎಂದು ಹೇಳಿದರು.

ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ. ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತಾರೆ ಅನ್ನುವ ನಂಬಿಕೆ ಇತ್ತು. ಆದ್ರೆ ದಿಢೀರ್ ಬೆಳವಣಿಗೆ ನೋವು ಆಗಿದೆ. ಈ ಬಗ್ಗೆ ಸಿಎಂ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ. ಸಿಎಂ ಭರವಸೆ ನೀಡಿದ್ದಾರೆ, ಸಿಎಂ ಮೇಲೆ, ಪಕ್ಷದ ಮೇಲೆ ಇನ್ನೂ ನಿರೀಕ್ಷೆ ಇದೆ. ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ನೋಡುತ್ತೇನೆ. ರಾಜಕೀಯಕ್ಕೆ, ಕ್ಷೇತ್ರಕ್ಕೆ ಹೊಸಬರಾಗಿರುವವರಿಗೆ ಟಿಕೆಟ್ ನೀಡಿದ್ದಾರೆ. ಕಾದು ನೋಡ್ತೀನಿ. ಟಿಕೆಟ್ ವಂಚಿತ ಸಿರಗುಪ್ಪ ಶಾಸಕ ಎಂ.ಬಿ.ನಾಗರಾಜ್ ಅಳಲನ್ನು ವ್ಯಕ್ತ ಪಡಿಸಿದರು.

Comments

Leave a Reply

Your email address will not be published. Required fields are marked *