ನೀವು ಧೀರ, ಶೂರ ಎಂದು ಹೊಗಳಿದವನು ಪಕ್ಷ ಬಿಟ್ಟು ಹೋದ: ಚಿಂಚನಸೂರಿಗೆ ಮಾಜಿ ಸಿಎಂ ಟಾಂಗ್

– ಖರ್ಗೆ ಬೆನ್ನಿಗೆ ಚೂರಿ ಹಾಕಿದ ಜಾಧವ್‍ರನ್ನು ಹೀನಾಯವಾಗಿ ಸೋಲಿಸಬೇಕು
– ಖರ್ಗೆ ಎದುರಿಸುವ ಶಕ್ತಿ ಮೋದಿಗಿಲ್ಲ

ಯಾದಗಿರಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೈದಾಪುರದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಪಕ್ಷ ಬಿಟ್ಟು ಹೋದ ನಾಯಕರನ್ನು ನೆನೆದು ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಅವರು, ನೀವು ಚಂದ್ರ, ಧೀರ, ಶೂರ ಎಂದು ನನ್ನನ್ನು ಹೊಗಳಿದ್ದ. ನಿಮ್ಮನ್ನ ಬಿಟ್ಟು ಹೋಗಲ್ಲ ಎಂದು ಹೇಳಿದ ಅಸಾಮಿ ಇದೀಗ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡ. ಮಾಜಿ ಶಾಸಕರಾದ ಉಮೇಶ್ ಜಾಧವ್, ಮಾಲಿಕಯ್ಯ ಗುತ್ತೇದಾರ್, ಡಾ.ಎ.ಬಿ.ಮಾಲಕರೆಡ್ಡಿ ಎಲ್ಲರೂ ಬಂದರು, ಪಕ್ಷ ಬಿಟ್ಟು ಹೋದರು. ಆದರೆ ಅವರು ಯಾರೂ ನಿರ್ದಿಷ್ಟ ಕಾರಣ ನೀಡಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಯಾವತ್ತೂ ಅಧಿಕಾರದಿಂದ ಹೋಗಲಿಲ್ಲ. ಅಧಿಕಾರವೇ ಅವರ ಹಿಂದೆ ಬಂದಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಕಾಂಗ್ರೆಸ್‍ನಲ್ಲಿದ್ದಾಗ ಅವರು ಹೇಳಿದ ಎಲ್ಲ ಕೆಲಸವನ್ನು ಮಾಡಿಕೊಟ್ಟೆ. ಆದರೆ ಪಕ್ಷ ಬಿಟ್ಟು ಹೋದರು. ಮುಂಬೈಗೆ ಹೋಗಿ ಬಿಜೆಪಿ ಹತ್ತಿರ ದುಡ್ಡು ತೆಗೆದುಕೊಂಡು ಅವರ ಪಕ್ಷ ಸೇರಿಕೊಂಡರು. ಉಮೇಶ್ ಜಾಧವ್ ಅವರಿಗೆ ನಾಚಿಕೆ ಆಗಬೇಕು. ಮಲ್ಲಿಕಾರ್ಜುನ ಖರ್ಗೆ ಅವರ ಬೆನ್ನಿಗೆ ಚೂರಿ ಹಾಕಿದ ಅವರನ್ನು ಹೀನಾಯವಾಗಿ ಸೋಲಿಸಬೇಕು. ಆಗ ಅವರಿಗೆ ಬುದ್ಧಿ ಬರುತ್ತದೆ ಎಂದು ಗುಡುಗಿದರು.

ಮಂತ್ರಿ ಸ್ಥಾನ ನೀಡುತ್ತೇವೆ ಎಂದು ಹೇಳಿದರೂ ಉಮೇಶ್ ಜಾಧವ್ ಪಕ್ಷ ಬಿಟ್ಟರು. ಈಗ ದುಡ್ಡು ಪಡೆದು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಮರ್ಯಾದೆ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಎದುರಿಸುವಷ್ಟು ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಲ್ಲ. ಹೀಗಾಗಿ ಪ್ರಧಾನಿ ಮೋದಿ ಸಂಸತ್‍ಗೆ ಬರುವುದಿಲ್ಲ. ಸಂಸತ್‍ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸ್ಥಾನ ಭರ್ತಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿಯವರು ಎಲ್ಲರೂ ಮಾನಗೆಟ್ಟವರು. ಅದಕ್ಕಾಗಿಯೇ ನನ್ನ ಮುಖ ನೋಡಬೇಡಿ, ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಐದು ವರ್ಷ ಏನು ಮಾಡಿದರು ಎಂದು ನಾವು ನೋಡಿದ್ದೇವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸೇವಲಾಲ ಜಯಂತಿ ಆಚರಣೆ ಮಾಡಿದೆ. ಕೋಲಿ ಹಾಗೂ ಕಬ್ಬಲಿಗ ಸಮುದಾಯವನ್ನು ಎಸ್‍ಟಿಗೆ ಸೇರಿಸಲು ಒತ್ತಡ ಹಾಕಿದ್ದೆ. ಅಂಬಿಗರ ಚೌಡಯ್ಯ ಜಯಂತಿ ಮಾಡಿದ್ದು ನಾನು. ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್, ಉಮೇಶ್ ಜಾಧವ್ ಏನು ಮಾಡಿದ್ದಾರೆ ಎಂದು ಕಿಡಿಕಾರಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಹಿಂದುಳಿದವರಿಗೆ ಒಂದೇ ಒಂದು ಟಿಕೆಟ್ ನೀಡಿಲ್ಲ. ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಬಾಯ್ಬಡಕ. ಅವನ ಯೋಗ್ಯತೆಗೆ ಬೆಂಕಿ ಹಾಕ, ಕುರುಬ ಸಮಾಜ ಒಬ್ಬ ನಾಯಕನಿಗೆ ಟಿಕೆಟ್ ಕೊಡಿಸಲು ಶ್ರಮಿಸಲಿಲ್ಲ. ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಗ್ರಾಮ ಪಂಚಾಯತ್ ಸದಸ್ಯರಾಗಲು ಕೂಡ ನಾಲಾಯಕ್. ಇಂತಹವನು ಸಂವಿಧಾನ ಬದಲಿಸುವ ಮಾತನಾಡುತ್ತಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *