ಸಿದ್ದರಾಮಯ್ಯ ಹೇಳಿಕೆಯಿಂದ ಸರ್ಕಾರದ ಮೇಲೆ ಪರಿಣಾಮವಿಲ್ಲ – ಮಾಜಿ ಸಿಎಂಗೆ ಡಿಕೆಶಿ ನೇರ ಟಾಂಗ್

ಬೆಂಗಳೂರು: ದೋಸ್ತಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಡಿಸಿಎಂ ಪರಮೇಶ್ವರ್ ಟಾಂಗ್ ಕೊಟ್ಟ ಬೆನ್ನಲ್ಲೇ, ವೈದ್ಯಕೀಯ ಶಿಕ್ಷಣ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸರ್ಕಾರದ ಕುರಿತ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನೇರವಾಗಿಯೇ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿಕೆಯಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮವಿಲ್ಲ. ಇಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಅಲ್ಲ. ಸಿದ್ದರಾಮಯ್ಯ ಹೇಳಿಕೆ ಅಧಿಕೃತವೂ ಅಲ್ಲ. ಅವರ ಹೇಳಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಅಗತ್ಯವಿಲ್ಲ. ಈ ಸರ್ಕಾರ ಐದು ವರ್ಷ ಇದ್ದೇ ಇರುತ್ತೆ. ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಸಹಿ ಮಾಡಿ ದಾಖಲೆ ಮಾಡಿದ್ದೇವೆ. ಅದ್ದರಿಂದ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಲಾಗಿದೆ. ಪಕ್ಷ ವಿರೋಧಿ ಹೇಳಿಕೆಗಳನ್ನ ಯಾರೇ ನೀಡಬಾರದು ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಲೋಕಾಭಿರಾಮವಾಗಿ ಹೇಳಿದ ಮಾತನ್ನು ಕಿಡಿಗೇಡಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಜೆಡಿಎಸ್ ಜತೆ ಕಾಂಗ್ರೆಸ್ ನಾಯಕರು ಅಶೋಕ ಹೊಟೇಲ್ ನಲ್ಲಿ ಮಾಡಿಕೊಂಡ ಒಪ್ಪಂದವೇ ಅಧಿಕೃತ. ಯಾರೂ ಕೂಡ ಪಕ್ಷದ ಬಗ್ಗೆಯಾಗಲಿ ಮೈತ್ರಿಯ ಬಗ್ಗೆಯಾಗಲಿ ಹೇಳಿಕೆ ನೀಡುವಂತಿಲ್ಲ. ಈ ಕುರಿತು ಯಾವುದೇ ಗೊಂದಲ ಸೃಷ್ಠಿ ಮಾಡಬೇಡಿ ಎಂದು ಮನವಿ ಮಾಡಿದರು.

ಇದೇ ವೇಳೆ ಮಾಜಿ ಶಾಸಕ ಚೆಲುವರಾಯಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಮೈತ್ರಿ ಬೆಂಗಳೂರಿಗೆ ಸೀಮಿತ ಮಂಡ್ಯಕ್ಕಲ್ಲ ಎಂದು ಹೇಳಿಕೆ ನೀಡಿದ್ದೂ ಸರಿಯಲ್ಲ. ಚುನಾವಣಾ ಹೊಂದಾಣಿಕೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ ಎಂದರು.

ಅಧಿವೇಶನಕ್ಕೆ ಗೈರು ಅಪಾರ್ಥ ಬೇಡ: ಜುಲೈ 5 ರಂದು ನೊಣವಿನಕೆರೆ ಗುರುಗಳ ಆಶ್ರಮದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ. ಚುನಾವಣೆಗೆ ಮುನ್ನವೇ ಕಾರ್ಯಕ್ರಮ ನಿಗದಿಯಾಗಿತ್ತು. ರಾಜ್ಯಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹಾಗಾಗಿ ಅಂದು ಬಜೆಟ್ ಮಂಡನೆ ಇದ್ದರೂ ಒಂದು ದಿನದ ಮಟ್ಟಿಗೆ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ರಾಜ್ಯಪಾಲರ ಜತೆಗೆ ಅಥವಾ ಹೆಲಿಕ್ಯಾಪ್ಟರ್ ನಲ್ಲಿ ಬಂದು ಹೋಗುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಯಾವುದೇ ಅಪಾರ್ಥ ಕಲ್ಪಿಸುವುದು ಬೇಡ ಎಂದು ಮನವಿ ಮಾಡಿದರು.

ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಡುಸಿದ್ದೇಶ್ವರ ಸಚಿವ ಡಿಕೆಶಿ ಅವರ ಆರಾಧ್ಯ ದೈವವಾಗಿದೆ. ಯಾವುದೇ ಶುಭ ಕಾರ್ಯವನ್ನು ಕೈಗೊಳ್ಳುವ ಮೊದಲು ಅವರು ಕಾಡುಸಿದ್ದೇಶ್ವರ ಮಠದ ಶಿವಯೋಗಿ ಸ್ವಾಮೀಜಿಯವರ ಆಶೀರ್ವಾದ ಪಡೆಯುತ್ತಾರೆ.

https://www.youtube.com/watch?v=NHZJagDSyjk

Comments

Leave a Reply

Your email address will not be published. Required fields are marked *