ಸಿದ್ದರಾಮಯ್ಯನವರಿಗೆ ಈಗ ಬುದ್ಧಿ ಬಂದಿದೆ: ರಂಭಾಪುರಿ ಶ್ರೀ

ವಿಜಯಪುರ: ಧರ್ಮ ಒಡೆಯುವುದಕ್ಕೆ ಹೋಗಿ ಕಾಂಗ್ರೆಸ್ ಪಕ್ಷ ಸೋಲನ್ನು ಕಂಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಈಗ ಒಪ್ಪಿಕೊಂಡಿದ್ದಾರೆ ಎಂದು ರಂಭಾಪುರ ಶ್ರೀಗಳು ಹೇಳಿದ್ದಾರೆ.

ಇಂದು ಜಿಲ್ಲೆಯ ನಿಡಗುಂದಿಯಲ್ಲಿ ಮಾತನಾಡಿದ ರಂಭಾಪುರ ಶ್ರೀಗಳು, ಮಾಜಿ ಸಿಎಂ ಸಿದ್ದರಾಮಯ್ಯನವರು ವೀರಶೈವ ಲಿಂಗಾಯಿತ ಧರ್ಮವನ್ನು ಒಡೆಯೋ ಪ್ರಯತ್ನದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಬುದ್ಧಿ ಚುನಾವಣಾ ಪೂರ್ವದಲ್ಲೇ ಇದ್ದಿದ್ದರೇ ಪಕ್ಷಕ್ಕೆ ಇಂತಹ ಹೊಡೆತ ಬೀಳುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಚುನಾವಣೆಯಲ್ಲಿ ನಾವು ಸೋತಿದ್ದು ಹೇಗೆ: ಕೆಪಿಸಿಸಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಆತ್ಮಾವಲೋಕನ

ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕಕ್ಕೆ ಕೊಡುಗೆ ನೀಡಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಧ್ವನಿ ಕೇಳ್ತಾ ಇದೆ. ಇನ್ನು ರೈತರ ಸಂಪೂರ್ಣ ಸಾಲ ಮನ್ನಾ ಮಾಡ್ತೀನಿ ಅಂತಾ ಹೇಳಿದ್ದರು. ಆದರೆ ಸಂಪೂರ್ಣ ಸಾಲಮನ್ನಾ ಮಾಡಿಲ್ಲ ಎಂದು ಎಚ್‍ಡಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ಜಿಲ್ಲೆಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಬಾರದು. ಉತ್ತರ ಕರ್ನಾಟಕದ ರೈತರು ಕಷ್ಟದಲ್ಲಿ ಇದ್ದಾರೆ. ಜಾತ್ಯಾತೀತ ದೇಶದಲ್ಲಿ ಇನ್ನೂ ಜಾತಿ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡ್ತಾ ಇದ್ದಾರೆ. ಸ್ಥಾನ ಮಾನಗಳನ್ನು ನೀಡಬೇಕಾದರೂ ಜಾತಿ ಆಧಾರ ಮೇಲೆ ಮಾಡ್ತಾ ಇದ್ದಾರೆ. ಯಾವುದೇ ಸರ್ಕಾರವಿರಲಿ ವ್ಯಕ್ತಿಯ ಕೆಲಸ, ಸಾಮಾಜಿಕ ಸೇವೆಗಳನ್ನು ನೋಡಿ ಅವಕಾಶ ನೀಡಬೇಕೇ ಹೊರತು, ಜಾತಿಯಿಂದ ಗುರುತಿಸುವುದಲ್ಲ ಎಂದು ಅಭಿಪ್ರಾಯಪಟ್ಟರು.

Comments

Leave a Reply

Your email address will not be published. Required fields are marked *