ಬ್ಲೂ ಫಿಲಂ ನೋಡಿದವರು ಈಗ ಡಿಸಿಎಂ – ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಚಿಕ್ಕೋಡಿ/ಬೆಳಗಾವಿ: ಬಿಜೆಪಿಯವರಿಗೆ ಮಾನ ಮರ್ಯಾದೆನೇ ಇಲ್ಲ. ಬ್ಲೂ ಫಿಲಂ ನೋಡಿದವರನ್ನು ಡಿಸಿಎಂ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಇಂದು ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಯ ಹಲವೆಡೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾನ ಮರ್ಯಾದೆನೇ ಇಲ್ಲ. ಬ್ಲೂ ಫಿಲಂ ನೋಡಿದವರನ್ನು ಡಿಸಿಎಂ ಮಾಡಿದ್ದಾರೆ. ಅದೂ ಸದನದಲ್ಲಿ ನೋಡಿದಂತವರನ್ನು ಉಪ ಮುಖ್ಯಮಂತ್ರಿ ಮಾಡಿದೆ. ಹಾಲು ಕುಡಿದ ಮಕ್ಕಳೇ ಬದುಕೋದಿಲ್ಲ, ಇನ್ನೂ ವಿಷ ಕುಡಿದ ಮಕ್ಕಳು ಬದುಕುತ್ತಾರಾ? ಹಾಗಾಗಿದೆ ಬಿಜೆಪಿ ಸರ್ಕಾರದ ಸ್ಥಿತಿ ಎಂದು ವ್ಯಂಗ್ಯ ಮಾಡಿದರು.

ಉಮೇಶ್ ಕತ್ತಿ ಅವರು ನನಗೆ ಕರೆ ಮಾಡಿದ್ದರು, ನಾನು ಅವರಿಗೆ ಕರೆ ಮಾಡಿಲ್ಲ. ನನಗೆ ಕಣ್ಣು ಆಪರೇಷನ್ ಆಗಿದ್ದ ಕಾರಣದಿಂದ ವಿಚಾರಿಸಲು ಫೋನ್ ಮಾಡಿದ್ದರು. ಆಗ ನಾನು ಬಾರಪ್ಪ ಮಾತಾಡೋಣ ಅಂದಿದ್ದೆ, ಆದರೆ ಬರಲಿಲ್ಲ ಎಂದರು.

ಇದೇ ವೇಳೆ ಅನರ್ಹ ಶಾಸಕರಿಗೂ ಮತ್ತು ಶ್ರೀಮಂತ ಪಾಟೀಲ್ ಜನರು ಪಾಠ ಕಲಿಸುತ್ತಾರೆ ಎಂದರು. ಕೆಪಿಸಿಸಿಯಲ್ಲಿ ಒಡಕಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಒಡಕಿಲ್ಲ. ನನಗೆ ಎಲ್ಲರೂ ವಿಶ್ವಾಸಿಗಳೇ ಇದ್ದಾರೆ. ವೈರಿಗಳು ಯಾರು ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Comments

Leave a Reply

Your email address will not be published. Required fields are marked *