ಸೋಮವಾರಕ್ಕೆ ವಿಧಾನಸಭೆ ಕಲಾಪ ಮುಂದೂಡಿಕೆ – ಸುಳಿವು ಕೊಟ್ಟ ಸಿದ್ದರಾಮಯ್ಯ

ಬೆಂಗಳೂರು: ವಿಶ್ವಾಸಮತಯಾಚನೆಯ ಪ್ರಸ್ತಾಪ ಕುರಿತಂತೆ ಸದನದಲ್ಲಿ ಚರ್ಚೆ ಮುಂದುವರಿದಿದ್ದು, ವಿಧಾನಸಭಾ ಕಲಾಪ ಸೋಮವಾರಕ್ಕೆ ಮುಂದೂಡುವ ಸಾಧ್ಯತೆಯಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಭೋಜನ ವಿರಾಮದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ವಿಶ್ವಾಸಮತಯಾಚನೆ ಚರ್ಚೆ ಮುಂದಕ್ಕೆ ಹೋಗುವ ಸಾಧ್ಯತೆಯಿದ್ದು, ಈಗ ಸಿಎಂ ಮಾತನಾಡಿದ್ದಾರೆ. ಹಲವು ನಾಯಕರು ಮಾತನಾಡುವುದು ಬಾಕಿ ಇದೆ. ಅಲ್ಲದೇ ಇಂದು ಶುಕ್ರವಾರ ಆಗಿದ್ದು, ಅರ್ಧ ದಿನ ಸದನ ಇರುವ ಸಾಧ್ಯತೆ ಇದೆ. ಆದ್ದರಿಂದ ಸೋಮವಾರವೂ ಚರ್ಚೆ ಮುಂದುವರಿಯುತ್ತದೆ ಎಂದು ಹೇಳಿದರು.

ಆಪರೇಷನ್ ಕಮಲದ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಶಾಸಕ ಶ್ರೀನಿವಾಸಗೌಡ ಅವರೇ ಮಾತನಾಡಿದ್ದು, ಹಣ ಯಾರು ತಂದು ಕೊಟ್ಟಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಅದರ ಅನ್ವಯ ಸ್ಪೀಕರ್ ಅವರು ಕ್ರಮಕೈಗೊಳ್ಳುತ್ತಾರೆ ಎಂದರು.

ಚರ್ಚೆಯ ಬಳಿಕಷ್ಟೇ ವಿಶ್ವಾಸಮತಯಾಚನೆ ನಡೆಯಲಿದ್ದು, ಸೋಮವಾರದ ಕಲಾಪದಲ್ಲಿಯೂ ಚರ್ಚೆ ನಡೆಯಲಿದೆ. ರಾಜ್ಯಪಾಲರು ಆದೇಶ ನೀಡಿದ್ದರೂ ಕೂಡ ಈಗಾಗಲೇ ಸದನದಲ್ಲಿ ನಿರ್ಣಯ ಮಂಡನೆ ಆಗಿರುವುದರಿಂದ ಈಗ ಇದರ ಬಗ್ಗೆ ತೀರ್ಮಾನ ಮಾಡಲು ಸ್ಪೀಕರ್ ಅವರೇ ಸುಪ್ರೀಂ ಆಗಿದ್ದಾರೆ. ಸಚಿವ ಕೃಷ್ಣಬೈರೇಗೌಡ ಅವರು ಕೂಡ ಈ ಬಗ್ಗೆ ಸದನದಲ್ಲಿ ವಿವರಿಸಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *