ಡಿಕೆಶಿ ಪಾಪ ಕಣ್ಣೀರು ಹಾಕಿಬಿಟ್ರು, ಎಷ್ಟು ಅಮಾನವೀಯ ಇದು- ಸಿದ್ದರಾಮಯ್ಯ

– ಕಾನೂನಾತ್ಮಕ ಹೋರಾಟ ಮಾಡ್ತೇವೆ

ಬೆಂಗಳೂರು: ನಾಲ್ಕನೇ ದಿನ ತನಿಖೆ ಮಾಡಿ ದಸ್ತಗಿರಿ ಮಾಡುವುದು ಕಾನೂನು ಬಾಹಿರ ಎಂದು ಇಡಿ ಅಧಿಕಾರಿಗಳು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ದಸ್ತಗಿರಿ ಮಾಡುವುದೇ ದೊಡ್ಡ ಅಪರಾಧವಾಗಿದೆ. ಕೊಲೆ, ದರೋಡೆ ಮಾಡಿದವರು ಸಾಕ್ಷಿ ನಾಶ ಮಾಡುತ್ತಾರೆ ಎಂದು ದಸ್ತಗಿರಿ ಮಾಡುತ್ತಾರೆ. ಈ ದಸ್ತಗಿರಿ ರಾಜಕೀಯ ಪ್ರೇರಿತವಾಗಿದೆ. ಚಿದಂಬರಂ ಹಾಗೂ ಡಿಕೆಶಿ ಇಬ್ಬರ ಬಂಧನವೂ ರಾಜಕೀಯ ಪ್ರೇರಿತವಾಗಿದ್ದು, ಇದು ಒಳ್ಳೆಯದಲ್ಲ ಎಂದು ಕಿಡಿಕಾರಿದರು.

ರಾಜಕೀಯ ಪ್ರೇರಿತ, ದ್ವೇಷದಿಂದ ಕೂಡಿದೆ. ತಪ್ಪು ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಸಮನ್ಸ್ ಕೊಟ್ಟು ಅಟೆಂಡ್ ಆಗದೆ ಹೋದರೆ ದಸ್ತಗಿರಿ ಮಾಡಲಿ. ಆದರೆ ಡಿಕೆಶಿ ಕರೆದಾಗೆಲ್ಲ ಹೋಗಿದ್ದಾರೆ. ಹಬ್ಬದ ದಿನವೂ ಬಿಟ್ಟಿಲ್ಲ. ಪಾಪ ಡಿಕೆಶಿ ಕಣ್ಣೀರೇ ಹಾಕಿಬಿಟ್ಟರು. ಎಷ್ಟು ಅಮಾನವೀಯ ಇದು ಎಂದು ಪ್ರಶ್ನಿಸಿದ್ದಾರೆ.

ನಾಲ್ಕು ದಿನವೂ ಇಡಿ ವಿಚಾರಣೆಗೆ ಡಿಕೆಶಿ ಹೋಗಿದ್ದಾರೆ. ಸಂಪೂರ್ಣ ರಾಜಕೀಯ ಸೇಡಿನ ಕ್ರಮ ಇದು. ಕಾಂಗ್ರೆಸ್ ಪಕ್ಷ ಇದನ್ನು ಸಹಿಸುವುದಿಲ್ಲ. ಪಕ್ಷದ ವತಿಯಿಂದ ಹೋರಾಟ ಮಾಡುತ್ತೇವೆ. ನಾವೆಲ್ಲ ಡಿಕೆಶಿ ಜೊತೆಗಿದ್ದೇವೆ. ರಾಜಕೀಯವಾಗಿ, ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಮತ್ತಷ್ಟು ಕೈ ಮುಖಂಡರನ್ನ ಕೇಂದ್ರ ಟಾರ್ಗೆಟ್ ಮಾಡಿರೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮಾಡಲಿ, ಕಾಂಗ್ರೆಸ್ ಅದಕ್ಕೆಲ್ಲ ಹೆದರಲ್ಲ. ಇದು ಜನರಿಗೆ ಅರ್ಥವಾಗುತ್ತಿದೆ. ರಾಷ್ಟ್ರ ಮತ್ತು ರಾಜ್ಯದಲ್ಲೂ ಈ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಲಿದೆ ಎಂದರು.

ಇದೇ ವೇಳೆ 7 ರಂದು ಪ್ರಧಾನಿ ಮೋದಿ ಬರುತ್ತಿದ್ದಾರೆ. ಅವತ್ತಾದರೂ ಎಲ್ಲ ಮಂತ್ರಿಗಳು, 25 ಸಂಸದರು ಹೋಗಿ ಇಲ್ಲೇ ಮೋದಿಯವರನ್ನ ಭೇಟಿ ಮಾಡಲಿ. ಹಾಗೂ ನೆರೆ ಪರಿಹಾರವನ್ನ ಯಡಿಯೂರಪ್ಪನವರು ಕೇಳಲಿ ಎಂದರು.

Comments

Leave a Reply

Your email address will not be published. Required fields are marked *