ಮೈತ್ರಿ ಸರ್ಕಾರದ Chemistry – Physics ಸರಿಯಾಗಿದೆ, ಇನ್ನೇನಿದ್ರೂ Mathematics ಮಾತ್ರ ಆಗ್ಬೇಕು: ಸಿದ್ದರಾಮಯ್ಯ

ನವದೆಹಲಿ: ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಹಾಡಿ ಹೊಗಳಿ ಜೆಡಿಎಸ್ ಪಕ್ಷಕ್ಕೆ ಟಾಂಗ್ ನೀಡಿದ ಬೆನ್ನಲ್ಲೇ ‘ಕೈ’ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಬುಲಾವ್ ನೀಡಿದೆ. ಕೇಂದ್ರ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಧನ ಹಿನ್ನೆಲೆಯಲ್ಲಿ ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಭೇಟಿಗೆ ತೆರಳಿದ್ದಾರೆ.

ಜಾರ್ಜ್ ಫರ್ನಾಂಡಿಸ್ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಮೈತ್ರಿ ಸರ್ಕಾರದ ಆಕ್ಷನ್ ರಿಯಾಕ್ಷನ್ ಚೆನ್ನಾಗಿದೆ. ಫಿಸಿಕ್ಸ್- ಕೆಮಿಸ್ಟ್ರಿ ಕೂಡ ಸರಿಯಾಗಿದೆ, ಇನ್ನೇನಿದ್ರೂ ಮ್ಯಾಥ್‍ಮ್ಯಾಟಿಕ್ಸ್ ಮಾತ್ರ ಆಗಬೇಕು. ಅದರಲ್ಲೂ ನಾವೇ ಮೇಲೆ ಎಂದು ಮಾರ್ಮಿಕವಾಗಿ ಮುಂದಿನ ಲೋಕಸಭಾ ಸೀಟು ಹಂಚಿಕೆ ಬಗ್ಗೆ ಮಾಹಿತಿ ನೀಡಿದರು.

ಇದೇ ವೇಳೆ ಕಾಂಗ್ರೆಸ್ ಶಾಸಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ನಮ್ಮ ಶಾಸಕರು ನನ್ನ ಮುಖ್ಯಮಂತ್ರಿ ಎಂದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದೆ ಮುಂದೆಯೂ ಆಗಬೇಕು ಎಂದಿದ್ದಾರೆ ಅಷ್ಟೇ. ಕಾಂಗ್ರೆಸ್‍ನ ಎಲ್ಲಾ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ, ಅತೃಪ್ತ ಶಾಸಕರು ಶೋಕಾಸ್ ನೋಟಿಸ್ ಗೆ ಉತ್ತರಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಮೈತ್ರಿ ಸರ್ಕಾರದಲ್ಲಿ ಯಾವ ಗೊಂದಲವೂ ಇಲ್ಲ, ದೇವೇಗೌಡರು ಏನು ಹೇಳಿದ್ದಾರೆ ನಂಗೆ ಗೊತ್ತಿಲ್ಲ. ಕುಮಾರಸ್ವಾಮಿ ಅವರೇ ರಾಜ್ಯದ ಸಿಎಂ. ಸಮನ್ವಯ ಸಮಿತಿಯಲ್ಲಿ ಮಾತ್ರ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದು ತಿಳಿಸಿದರು. ಇತ್ತ ಜಾರ್ಜ್ ಫರ್ನಾಂಡಿಸ್ ಅಂತಿಮ ನಮನದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಜಮೀರ್ ಅಹ್ಮದ್ ಅವರು ಕೂಡ ಸಾಥ್ ನೀಡಿದರು.

ಇತ್ತ ರಾಜ್ಯ ಉಸ್ತುವಾರಿ ವೇಣುಗೋಪಾಲ್, ದಿನೇಶ್ ಗುಂಡೂರಾವ್ ಸಹ ದೆಹಲಿಗೆ ತೆರಳಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅದರಲ್ಲೂ ಸಿಎಂ ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ಮತ್ತು ಇಂದು ಸಂಪುಟ ಸಭೆಯಲ್ಲಿ ಎಚ್‍ಡಿಕೆ ಕೋಪಗೊಂಡ ವಿಚಾರದ, ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯ ಬಗ್ಗೆ ಚರ್ಚೆ ನಡೆಯಲಿದೆ.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *