ಬೆಂಗಳೂರು: ಸಮ್ಮಿಶ್ರ ಸರ್ಕಾರ ಬೀಳಿಸಲು ಬಿಜೆಪಿ ಯತ್ನಿಸುತ್ತಿರುವ ಸಂದರ್ಭದಲ್ಲಿ ಆಪರೇಷನ್ ಕಮಲ ವಿರುದ್ಧ ರಣತಂತ್ರ ರೂಪಿಸಲು ದೋಸ್ತಿ ಸರ್ಕಾರದ ಪ್ರಮುಖ ನಾಯಕರು ಇಂದು ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ಎಚ್ಡಿ ಕುಮಾರಸ್ವಾಮಿ ಅವರ ದಂಗೆ ಹೇಳಿಕೆ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಿದ್ದರಾಮಯ್ಯ ನಿವಾಸದಲ್ಲಿ ಸಿಎಂ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯದರ್ಶಿ ಈಶ್ವರ್ ಖಂಡ್ರೆ ಸಭೆ ನಡೆಸಿ ಚರ್ಚಿಸಿದರು. ಪ್ರಮುಖವಾಗಿ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲಾಗಿದೆ. ಎರಡು ಪಕ್ಷದ ಶಾಸಕರನ್ನ ಬಿಜೆಪಿ ಸಂಪರ್ಕ ಮಾಡಿರುವುದು ಸತ್ಯ ಎಂದು ಒಪ್ಪಿಕೊಂಡ ನಾಯಕರು ಆಪರೇಷನ್ ಕಮಲಕ್ಕೆ ಒಳಗಾಗಿ ಜೆಡಿಎಸ್-ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟರೆ ಅಂಗೀಕರಿಸದಂತೆ ಸ್ಪೀಕರ್ ಮೇಲೆ ಒತ್ತಡ ಹೇರುವುದು. ಶಾಸಕರು ನೀಡಿದ ರಾಜೀನಾಮೆಯನ್ನು ಸಭಾಧ್ಯಕ್ಷರು ಸ್ವೀಕರಿಸುವುದನ್ನು ತಡವಾಗುವಂತೆ ಮಾಡಿ ಬಿಜೆಪಿಯ 8 ರಿಂದ 10 ಶಾಸಕರನ್ನು ಸೆಳೆದು ಬಿಜೆಪಿಗೆ ಪೆಟ್ಟು ನೀಡುವುದು. ಇದು ಯಾವುದು ಸಾಧ್ಯವಾಗದೇ ಇದ್ದರೆ ವಿಧಾನಸಭೆ ವಿಸರ್ಜಿಸುವ ಬಗ್ಗೆ ಕ್ಯಾಬಿನೆಟ್ನಲ್ಲಿ ತೀರ್ಮಾನ ಕೈಗೊಳ್ಳುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ನಾಯಕರ ಮನವೊಲಿಕೆ: ಪಕ್ಷದ ನಾಯಕರ ವಿರುದ್ಧವೇ ಬಂಡಾಯ ಬಾವುಟ ಹಾರಿಸಿದ್ದ ಜಾರಕಿಹೊಳಿ ಬ್ರದರ್ಸ್ ಮತ್ತು ಬಳ್ಳಾರಿ ಜಿಲ್ಲೆಯ ಕೆಲ ಶಾಸಕರ ಮೇಲೆ ಪಕ್ಷ ಮುಖಂಡರಿಗೆ ಇನ್ನು ವಿಶ್ವಾಸ ಬಂದಿಲ್ಲ. ಇಬ್ಬರನ್ನು ಮನವೊಲಿಸುವ ಕೆಲಸ ಪಕ್ಷ ಮತ್ತು ಸರ್ಕಾರದ ಮಟ್ಟದಿಂದ ನಡೆಸಲು ತೀರ್ಮಾನಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸಮ್ಮಿಶ್ರ ಸರ್ಕಾರ ಬಿಳಿಸುವ ಪ್ರಯತ್ನ ಬಿಜೆಪಿ ಮಾಡುತ್ತೆ ಎಂಬ ವಿಷಯವೂ ಚರ್ಚೆ ನಡೆಸಲಾಗಿದ್ದು, ಇದಕ್ಕೆ ಅವಕಾಶ ಕೊಡಬಾರದು ನೀಡಬಾರದು ಎಂಬ ತೀರ್ಮಾನವನ್ನು ನಾಯಕರು ಕೈಗೊಂಡಿದ್ದಾರೆ.
ಸಿದ್ದು ಅಸಮಾಧಾನ: ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ನೀಡಿದ ಹೇಳಿಕೆ ಸದ್ಯ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸಿಎಂ ಆಗಿ ಎಚ್ಡಿಕೆ ಇಂತಹ ಹೇಳಿಕೆ ನೀಡಬಾರದು. ವಿರೋಧ ಪಕ್ಷದವರು ಏನೇ ಹೇಳಿದರೂ ಸಂಯಮ ಕಳೆದುಕೊಳ್ಳಬಾರದು. ಎಚ್ಚರಿಕೆಯಿಂದ ಮಾತನಾಡಬೇಕು. ಕಾನೂನು, ಸುವ್ಯವಸ್ಥೆ ಕಾಪಾಡಬೇಕಾದ ಜವಾಬ್ದಾರಿ ಸರ್ಕಾರದ್ದು. ಪ್ರತಿಯೊಂದಕ್ಕೂ ಪ್ರತಿಕ್ರಿಯಿಸಿ ಗೊಂದಲ ಸೃಷ್ಟಿಸಬೇಡಿ ಎಂಬ ಸಲಹೆಯನ್ನು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.

ಪರಿಷತ್ ಚುನಾವಣೆ: ಇಂದಿನ ಸಭೆಯಲ್ಲಿ ಪ್ರಮುಖವಾಗಿ ಮುಂದಿನ ವಿಧಾನ ಪರಿಷತ್ ಚುನಾವಣೆ ಹೊಂದಾಣಿಕೆ ಕುರಿತು ಕೂಡ ಚರ್ಚೆ ನಡೆಸಲಾಗಿದೆ. ಚುನಾವಣೆ ನಡೆಯುವ 6 ಸ್ಥಾನಗಳಲ್ಲಿ 4 ಕಾಂಗ್ರೆಸ್ 2 ಸ್ಥಾನ ಜೆಡಿಎಸ್ ಸ್ಪರ್ಧೆ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಅಡ್ಡಮನತದಾನ ತಪ್ಪಿಸಲು ವಿಧಾನ ಪರಿಷತ್ ಸದಸ್ಯರ ಹೆಸರನ್ನು ಎಲ್ಲೂ ಬಹಿರಂಗವಾಗಿ ಮಾಡದೇ ನೇರವಾಗಿ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ನಾಮಿನೇಷನ್ ಮಾಡಿಸಿ ಮತ ಚಲಾವಣೆ ಮಾಡುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಸಚಿವ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯದರ್ಶಿ ಈಶ್ವರ್ ಖಂಡ್ರೆ, ಡಿಸಿಎಂ ಪರಮೇಶ್ವರ್ ಅವರು ಸಭೆಯಲ್ಲಿ ಮಾತುಕತೆ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply