ಪ್ರಮುಖ 6 ಖಾತೆಗಾಗಿ ಸಚಿವರ ಮಧ್ಯೆ ಪೈಪೋಟಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಸಂಪುಟದಲ್ಲಿ ಪ್ರಮುಖ 6 ಖಾತೆಗಾಗಿ ಸಚಿವರ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದೆ.

ಉಪಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್‌ (DK Shivakumar) ಅವರು ಇಂಧನ, ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿದ್ದರೆ ಕೆಜೆ ಜಾರ್ಜ್, ರಾಮಲಿಂಗಾರೆಡ್ಡಿ ಅವರು ಬೆಂಗಳೂರು ಅಭಿವೃದ್ಧಿ ಮೇಲೆ ಕಣ್ಣಿಟ್ಟಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಜುಲೈನಲ್ಲಿ ರಾಜ್ಯ ಬಜೆಟ್ ಮಂಡನೆ – ಸಿಎಂ ಸಿದ್ದರಾಮಯ್ಯ ಘೋಷಣೆ

 
ಜಲಸಂಪನ್ಮೂಲ ಇಲಾಖೆ ಮೇಲೆ ಎಂ.ಬಿ.ಪಾಟೀಲ್‍ಗೆ ಆಸೆ ಪಟ್ಟರೆ ಲೋಕೋಪಯೋಗಿ ಅಥವಾ ಕಂದಾಯ ಇಲಾಖೆ ಮೇಲೆ ಪರಮೇಶ್ವರ್ ಕಣ್ಣು ಬಿದ್ದಿದೆ. ಸಚಿವರು ಈಗಾಗಲೇ ಖಾತೆ ನೀಡುವಂತೆ ಬೇಡಿಕೆ ಇರಿಸಿದ ಹಿನ್ನೆಲೆಯಲ್ಲಿ ಈಗಲೇ ಪ್ರಬಲ ಖಾತೆ ಹಂಚಿಕೆಯಾಗುತ್ತಾ ಅಥವಾ ಪೂರ್ಣ ಸಂಪುಟ ರಚನೆ ಬಳಿಕ ಖಾತೆ ಹಂಚಿಕೆಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

ಶುಕ್ರವಾರ ರಾತ್ರಿ ದೆಹಲಿಯ ವೇಣುಗೋಪಾಲ್‌ ನಿವಾಸದಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಆರಂಭದಲ್ಲಿ 20ಕ್ಕೂ ಹೆಚ್ಚು ಶಾಸಕರಿಗೆ ಮಂತ್ರಿ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಸಿದ್ದರಾಮಯ್ಯ ಮತ್ತು ಡಿಕೆಶಿ ತಮ್ಮ ಆಪ್ತ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಈ ಕಾರಣಕ್ಕೆ ಅಂತಿಮವಾಗಿ 8 ಮಂದಿ ಶಾಸಕರಿಗೆ ಮಾತ್ರ ಆರಂಭದಲ್ಲಿ ಸಚಿವ ಸ್ಥಾನ ನೀಡಲು ಹೈಕಮಾಂಡ್‌ ನಿರ್ಧರಿಸಿತು.