ಸಿದ್ದಾಪುರದಲ್ಲಿ ಭೂ ಕುಸಿತ – ಡ್ಯಾಂ ಒಡೆದು ರಸ್ತೆ ಜಲಾವೃತ

ಕಾರವಾರ: ಭಾರೀ ಮಳೆ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸಿದ್ದು, ಎಲ್ಲೆಂದರಲ್ಲಿ ಭೂಮಿ ಕುಸಿದು ರಸ್ತೆಗಳು ಬಂದ್ ಆಗಿರುವುದು ಹಾಗೂ ಹೊಲಕ್ಕೆ ಹೊಲವೇ ಕುಸಿದಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ಚೆಕ್ ಡ್ಯಾಂ ಒಡೆದು ಮುಂಡುಗೋಡು ಭಾಗದ ಹಳ್ಳಿಗಳಲ್ಲಿನ ಮನೆಗಳು ಜಲಾವೃತಗೊಂಡಿವೆ.

ಸಿದ್ದಾಪುರ ತಾಲೂಕಿನ ಭಾನ್ಕುಳಿ ಗ್ರಾಮದಲ್ಲಿ ನಾಲ್ಕು ಎಕರೆ ಭೂಮಿ ಸಂಪೂರ್ಣ ಬಿರುಕು ಬಿಟ್ಟಿದ್ದು, ಆಳಕ್ಕೆ ಕುಸಿದಿದೆ. ಭೂಮಿ ಬಿರುಕು ಬಿಟ್ಟು ಕ್ಷಣ ಕ್ಷಣಕ್ಕೂ ಕುಸಿಯುತ್ತಿದ್ದು, ಇನ್ನೂ ಹೆಚ್ಚಿನ ಭಾಗ ಕುಸಿಯುವ ಹಂತ ತಲುಪಿದೆ. ಭೂಮಿ ಕುಸಿತದಿಂದ ದೊಡ್ಡ ಕಂದಕಗಳು ನಿರ್ಮಾಣವಾಗಿವೆ. ನಾಲ್ಕು ಎಕರೆ ಭೂಮಿ ಪೂರ್ತಿ ಇದೇ ರೀತಿ ಆಗುತ್ತಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಗ್ರಾಮದಲ್ಲಿನ ಮನೆಗಳೂ ಕುಸಿದರೆ ಏನು ಗತಿ ಎಂಬ ಭಯದಲ್ಲೇ ಗ್ರಾಮಸ್ಥರು ಬದುಕುತ್ತಿದ್ದಾರೆ.

ಮುಂಡಗೋಡಿನ ಚಿಗಳ್ಳಿ ಚೆಕ್ ಡ್ಯಾಮ್ ಒಡೆದ ಪರಿಣಾಮ 1,150 ಎಕರೆ ಕೃಷಿ ಜಮೀನು ಸಂಪೂರ್ಣ ಜಲಾವೃತವಾಗಿದ್ದು, ಹುಬ್ಬಳ್ಳಿ-ಮುಂಡಗೋಡು-ಶಿರಸಿ ರಾಜ್ಯ ಹೆದ್ದಾರಿ ಜಲಾವೃತವಾಗಿದೆ.

ಚೆಕ್ ಡ್ಯಾಂ ಒಡೆದ ಹಿನ್ನೆಲೆಯಲ್ಲಿ ಮುಂಡಗೋಡು ಭಾಗದ ಚೌಡಳ್ಳಿ, ಕೋಡಂಬಿ, ಹನುಮಾಪುರ, ಅಂದಲಗಿ, ಅಜ್ಜಳ್ಳಿ, ಜೋಗೇಶ್ವರಹಳ್ಳ ಪ್ರದೇಶದ 40ಕ್ಕೂ ಅಧಿಕ ಮನೆಗಳು ಜಲಾವೃತವಾಗಿದೆ. ಒಡೆದ ಚೆಕ್ ಡ್ಯಾಂನಿಂದ 0.3 ಟಿಎಂಸಿ ನೀರು ಹೊರ ಬರುತ್ತಿದ್ದು, ಆರು ಮೀಟರ್ ಎತ್ತರದಲ್ಲಿ ನೀರು ಹರಿಯುತ್ತಿದೆ. ಪ್ರವಾಹ ವೀಕ್ಷಿಸಲು ಜನ ತಂಡೋಪ ತಂಡವಾಗಿ ಬರುತ್ತಿದ್ದು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಮೂರು ತಾಸಿನಲ್ಲಿ ಪ್ರವಾಹದ ಮಟ್ಟ ಇಳಿಯಲಿದ್ದು ಪ್ರವಾಹ ಸಂಪೂರ್ಣ ಇಳಿಮುಖವಾಗಲಿದೆ ಎಂದು ಜಿಲ್ಲಾ ಪಂಚಾಯತಿ ಸಿಇಓ ರೋಷನ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

20 ಮೀಟರ್ ಎತ್ತರ, 830 ಮೀಟರ್ ಅಗಲವಿರುವ ಡ್ಯಾಂ 6,800 ಕ್ಯೂಸೆಕ್ ನೀರನ್ನು ಹಿಡಿದಿಡುವ ಸಾಮಥ್ರ್ಯ ಹೊಂದಿತ್ತು. ಚೆಕ್ ಡ್ಯಾಂ ಸುತ್ತಲಿನ ಗ್ರಾಮಗಳಲ್ಲಿ ಕೃತಕ ಪ್ರವಾಹ ಉಂಟಾಗಿದ್ದು ಎರಡು ದಿನಗಳ ಕಾಲ ಈ ನೀರಿನಿಂದ ಜನರು ಪರದಾಡಲಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಭೇಟಿ ನೀಡಿದ್ದು, ಸ್ಥಳೀಯ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

Comments

Leave a Reply

Your email address will not be published. Required fields are marked *