ತ್ರಿವಿಧ ದಾಸೋಹಿಗೆ 111ನೇ ಹುಟ್ಟುಹಬ್ಬ – ಸಿದ್ದಗಂಗಾ ಮಠದತ್ತ ಲಕ್ಷಾಂತರ ಭಕ್ತರು

ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಲಿಯುಗದ ಚೈತನ್ಯ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀ ಅವರಿಗೆ ಇಂದು 111ನೇ ಹುಟ್ಟುಹಬ್ಬ. ಮಹಾಪುರುಷರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಭಕ್ತರು ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ನಡೆಯಲಿರುವ ಶ್ರೀಗಳ ಜನ್ಮದಿನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ. ಈಗಾಗಲೇ ಸಾವಿರಾರು ಭಕ್ತರು ಆಗಮಿಸಿದ್ದು, ಮಠದ ಆವರಣ ಭಕ್ತರಿಂದಲೇ ತುಂಬಿಹೋಗಿದೆ. ಎಂದಿನಂತೆ ಪ್ರಾಥಃಕಾಲದಲ್ಲಿ ಎದ್ದಿರುವ ಶ್ರೀಗಳು ಇಷ್ಟಲಿಂಗ ಪೂಜೆಗಳನ್ನು ಪೂರೈಸಿದ್ದು, ಬೆಳಗ್ಗೆ 9 ಗಂಟೆ ವೇಳೆಗೆ ಗುರು ಉದ್ದಾನೇಶ್ವರ ಗದ್ದುಗೆಗೆ ನಮಸ್ಕರಿಸಲಿದ್ದಾರೆ. ಇದನ್ನೂ ಓದಿ; ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಮೋದಿಗೆ ಸಿಎಂ ಪತ್ರ

ಮಠದ ಆವರಣದಲ್ಲಿ ನಿರ್ಮಿಸಲಾಗಿರುವ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಬೆಳಗ್ಗೆ 10.30ರಿಂದ ಶ್ರೀಗಳು ಭಕ್ತರಿಗೆ ದರ್ಶನ ನೀಡಲಿದ್ದಾರೆ. ಇದೇ ವೇದಿಕೆಯಲ್ಲಿ ಶ್ರೀಗಳ ಪಾದಪೂಜೆ ಮತ್ತು ಜನ್ಮದಿನೋತ್ಸವ ನಡೆಯಲಿದೆ. ಭಕ್ತರು ಸರದಿ ಸಾಲಿನಲ್ಲಿ ಬಂದು ನಮಸ್ಕರಿಸಿ, ಶತಾಯುಷಿ ಶ್ರೀಗಳ ಆಶೀರ್ವಾದ ಪಡೆಯಲು ಬ್ಯಾರಿಕೇಡ್‍ಗಳನ್ನು ಅಳವಡಿಸಿ ವ್ಯವಸ್ಥೆ ಮಾಡಲಾಗಿದೆ.

ಈ ಸಂಬಂಧ ಮಠದಲ್ಲಿ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಪರಮಪೂಜ್ಯರು 110 ವರ್ಷ ಪೂರೈಸಿ 111ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಮಠದಲ್ಲಿ ಶ್ರೀಗಳಿಗೆ ಸುತ್ತೂರು ಶ್ರೀ, ಮುರುಘಾ ಶ್ರೀ ಮತ್ತು ವಿವಿಧ ಮಠಾಧೀಶರುಗಳು ಪಾದಪೂಜೆ ನೆರವೇರಿಸಲಿದ್ದಾರೆ. ಪಾದಪೂಜೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಗುರುವಂದನೆ ನಡೆಯಲಿದೆ. ಶ್ರೀಗಳಿಗೆ ಶುಭಕೋರಲು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬರ್ತಿದ್ದಾರೆ. ಶ್ರೀಗಳ ಹುಟ್ಟಿದ ದಿನವನ್ನ ಹಬ್ಬದಂತೆ ಆಚರಿಸುತ್ತಿರುವುದು ಖುಷಿ ತಂದಿದೆ ಅಂದ್ರು.

ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರ ಕುರಿತು ಮಾತನಾಡಿದ ಅವರು, ರಾಜ್ಯ ಅಥವಾ ಕೇಂದ್ರದಿಂದ ಯಾವುದೇ ಪ್ರಶಸ್ತಿಯನ್ನು ಕೇಳುವಂತದ್ದಲ್ಲ. ಭಾರತ ರತ್ನ ನೀಡಬೇಕೆಂಬುದು ಭಕ್ತರ ಒತ್ತಾಯ ಇರಬಹುದು. ಅದು ಅವರ ವೈಯಕ್ತಿಕ ವಿಚಾರವಾಗಿದೆ. ಪ್ರಶಸ್ತಿ ಕುರಿತು ನಮಗೆ ಯಾವುದೇ ಸೂಚನೆ ಬಂದಿಲ್ಲ ಅಂತ ಅವರು ಹೇಳಿದ್ರು.

Comments

Leave a Reply

Your email address will not be published. Required fields are marked *