111ರ ಸಂಭ್ರಮದಲ್ಲಿ ಸಿದ್ದಗಂಗಾ ಶ್ರೀ- ಮೋದಿ, ಅಮಿತ್ ಶಾ ಕನ್ನಡದಲ್ಲೇ ವಿಶ್

ಬೆಂಗಳೂರು: ನಡೆದಾಡುವ ದೇವರು, ತ್ರಿವಿಧ(ಅನ್ನ, ಅಕ್ಷರ, ಜ್ಞಾನ)ದಾಸೋಹಿ, ಕಲಿಯುಗದ ಚೈತನ್ಯ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಇಂದು 111ನೇ ವರ್ಷಕ್ಕೆ ಕಾಲಿಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕನ್ನಡದಲ್ಲೇ ಶುಭಕೋರಿದ್ದಾರೆ.

`ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಸುದೀರ್ಘ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ಸದಾ ಪ್ರಾರ್ಥಿಸುತ್ತೇನೆ. ತಮ್ಮ ಸಾನ್ನಿಧ್ಯದಿಂದ ಭಕ್ತರನ್ನು ಅನುಗ್ರಹಿಸುತ್ತಾ, ಸಮಾಜಕ್ಕೆ ಅವರ ಮಾರ್ಗದರ್ಶನ ನಿರಂತರವಾಗಿರಲಿ ಅಂತ ಪ್ರಧಾನಿಯವರು ಶುಭಾಶಯ ತಿಳಿಸಿದ್ದಾರೆ.

ತುಮಕೂರಿನ ಶ್ರೀ ಸಿದ್ದಗಂಗಾ ಮಠ ಭಾರತ ದೇಶದ ಹಿರಿಮೆಯಾಗಿದೆ. ಸಮಾಜಕ್ಕೆ ಶಕ್ತಿ ತುಂಬುತ್ತಾ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಸಿದ್ದಗಂಗಾ ಮಠ ಮುಂಚೂಣಿಯಲ್ಲಿದೆ. ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದಿರುವುದು ನನ್ನ ಸೌಭಾಗ್ಯ ಎಂದು ನಾನು ಭಾವಿಸಿದ್ದೇನೆ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನದಂದು ಇಡೀ ದೇಶವೇ ಅವರಿಗೆ ಶುಭಾಶಯಗಳನ್ನು ಸಲ್ಲಿಸುತ್ತಿದೆ. ದೇಶದ ಅತ್ಯಂತ ವಂದನೀಯ ಮತ್ತು ಪೂಜನೀಯ ಗುರುಗಳಲ್ಲಿ ಪೂಜ್ಯ ಶ್ರೀಗಳು ಒಬ್ಬರಾಗಿದ್ದಾರೆ. ಅವರ ಅತ್ಯುತ್ತಮ ಸೇವಾಕಾರ್ಯಗಳು ತಲೆಮಾರುಗಳನ್ನು ತಲುಪಿದೆ ” ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕೂಡ ಸ್ವಾಮೀಜಿಯವರಿಗೆ ವಿಶ್ ಮಾಡಿದ್ದು, `ನಡೆದಾಡುವ ದೇವರು, ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳಿಗೆ 111ನೇ ಜನ್ಮದಿನದಂದು ನಾಡಿನ ಜನತೆಯ ಪರವಾಗಿ ಪ್ರಣಾಮಗಳು. ಅವರ ಮಾರ್ಗದರ್ಶನ ಸಮಾಜಕ್ಕೆ ಅತ್ಯಗತ್ಯ, ಶ್ರೀಗಳಿಗೆ ದೀರ್ಘಾಯುಷ್ಯ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

 

Comments

Leave a Reply

Your email address will not be published. Required fields are marked *