ತುಮಕೂರು: ನಡೆದಾಡುವ ದೇವರು 111 ವರ್ಷ ವಯಸ್ಸಿನ ಸಿದ್ದಗಂಗಾ ಶ್ರೀಗಳು ಯಾರ ನೆರವಿಲ್ಲದೆ ನಡೆದಾಡುವ ಮೂಲಕ ಭಕ್ತಾಧಿಗಳಲ್ಲಿ ಬೆರಗನ್ನು ಮೂಡಿಸಿದ್ದಾರೆ. ಹಳೇ ಮಠದಿಂದ ಹೊಸಮಠಕ್ಕೆ ತೆರಳುವ ವೇಳೆ ತುಸು ದೂರ ಯಾರ ಸಹಾಯವೂ ಇಲ್ಲದೆ ಹೆಜ್ಜೆ ಹಾಕಿ ಭಕ್ತವೃಂದವನ್ನು ಪುಳಕಿತಗೊಳಿಸಿದ್ದಾರೆ.
ಅನಾರೋಗ್ಯದಿಂದ ಕೆಲ ಕಾಲಚಿಕಿತ್ಸೆಯಲ್ಲಿದ್ದ ಶ್ರೀಗಳು ಪರಿಚಾರಕರ ನೆರವಿನೊಂದಿಗೆ ಕಾರಿನಲ್ಲಿ ಓಡಾಡುತ್ತಿದ್ದರು. ಈ ನಡುವೆ ಸ್ವತಃ ತಾವೇ ಊರುಗೋಲಿನ ಸಹಾಯದಿಂದ ನಡೆದಾಡಿದ್ದಾರೆ. ಭಕ್ತಾಧಿಗಳು ಶ್ರೀಗಳು ನಡೆದಾಡುವುದನ್ನು ಮೊಬೈಲನಲ್ಲಿ ಸೆರೆ ಹಿಡಿದು ಸಂತೋಷಪಟ್ಟಿದ್ದಾರೆ.

ಪಿತ್ತಕೋಶಕ್ಕೆ ಸ್ಟಂಟ್ ಅಳವಡಿಸಿ ಆರು ತಿಂಗಳು ಕಳೆದ ಹಿನ್ನೆಲೆಯಲ್ಲಿ ಶತಾಯುಷಿ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು, ಇತ್ತೀಚೆಗೆ ಜನರಲ್ ಚೆಕ್ ಅಪ್ ಗಾಗಿ ಬೆಂಗಳೂರಿನ ಕೆಂಗೇರಿಯಲ್ಲಿರೋ ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ್ದರು. ಮುಂಜಾನೆ ಆಗಮಿಸಿದ ಶ್ರೀಗಳು ಕಾರಿನಿಂದ ಇಳಿದು ವ್ಹೀಲ್ ಚೇರ್ ನಂತಹ ಸೌಲಭ್ಯ ನಿರಾಕರಿಸಿ ನಡೆದುಕೊಂಡೇ ಆಸ್ಪತ್ರೆ ಒಳಗೆ ಹೋಗಿದ್ದರು.
ಜನವರಿ 27 ರಂದು ಬಿಜಿಎಸ್‍ಗೆ ದಾಖಲಾಗಿದ್ದ ಶ್ರೀಗಳಿಗೆ ಮೂರು ಸ್ಟಂಟ್ ಅಳವಡಿಸಲಾಗಿತ್ತು. ಅದಕ್ಕೂ ಮುನ್ನ 5 ಸ್ಟಂಟ್ ಸೇರಿ ಒಟ್ಟು 8 ಸ್ಟಂಟ್ ಅಳವಡಿಸಲಾಗಿದೆ. ಸ್ಟಂಟ್ ಅಳವಡಿಸಿದ ಆರು ತಿಂಗಳಾದ ಕಾರಣ ಜನರಲ್ ಚೆಕ್ ಅಪ್ ಗಾಗಿ ಶ್ರೀಗಳು ಆಸ್ಪತ್ರೆಗೆ ಚಿಕಿತ್ಸೆಗೆ ಮತ್ತೆ ಆಗಮಿಸಿದ್ದರು. ಡಾ. ರವೀಂದ್ರ ನೇತೃತ್ವದಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದು, ಬಳಿಕ ಹಳೇ ಮಠದ ಕೊಠಡಿಯಲ್ಲಿ ವಿಶ್ರಾಂತಿ ಪಡೆದಿದ್ದರು.

Leave a Reply