ರಾಯಚೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಅಗಲಿಕೆ ಇಡೀ ರಾಜ್ಯವನ್ನೇ ದುಃಖದ ಮಡುವಿಗೆ ತಳ್ಳಿದೆ. ಇತ್ತ ರಾಯಚೂರಿನ ಗ್ರಾಮದ ಜನರಿಗೆ ಶ್ರೀಗಳನ್ನ ಕಳೆದುಕೊಂಡ ಅನಾಥ ಭಾವ ಬಂದಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಡಾ.ಶಿವಕುಮಾರ ಸ್ವಾಮೀಜಿಗಳಿಗೂ ರಾಯಚೂರಿನ ಮಾನ್ವಿ ತಾಲೂಕಿನ ಉಮಳಿಪನ್ನೂರು ಗ್ರಾಮದ ಜನತೆಗೆ ಇದೆ ವಿಶೇಷ ಸಂಬಂಧ. ಈ ಹಿಂದೆ ಕೇವಲ ಗುಡಿಸಲುಗಳಿಂದ ಕೂಡಿದ್ದ ಗ್ರಾಮದಲ್ಲಿ ಮನೆಗಳು ತಲೆ ಎತ್ತಲು ಕಾರಣರಾದ ವ್ಯಕ್ತಿ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು. ಈ ಕಾರಣಕ್ಕೆ ಈ ನಗರವನ್ನು ಸಿದ್ದಗಂಗಾ ನಗರ ಎಂದೇ ನಾಮಕರಣ ಮಾಡಲಾಗಿದೆ. ಇದನ್ನೂ ಓದಿ: ನಿಮಗೆ ದೇವರ ದರ್ಶನ ಆಗಿದ್ಯಾ – ಶ್ರೀಗಳು ನೀಡಿದ ಉತ್ತರಕ್ಕೆ ಅಚ್ಚರಿಗೊಂಡ ಡಾ. ರೇಲಾ

2009ರಲ್ಲಿ ಉಂಟಾದ ತುಂಗಭದ್ರಾ ನದಿಯ ನೆರೆಹಾವಳಿಗೆ ಉಮಳಿಪನ್ನೂರು ಗ್ರಾಮದ ಜನ ತಮ್ಮ ಸೂರುಗಳನ್ನೆಲ್ಲಾ ಕಳೆದುಕೊಂಡು ಊಟಕ್ಕೂ ಪರದಾಡುವ ಸ್ಥಿತಿ ತಲುಪಿದ್ದರು. ಆಗ ಇಡೀ ಗ್ರಾಮವನ್ನ ದತ್ತು ತೆಗೆದುಕೊಂಡ ಸಿದ್ದಗಂಗಾ ಮಠ 30 ಎಕರೆ ಜಾಗದಲ್ಲಿ 2 ಕೋಟಿ ರೂ. ಖರ್ಚುಮಾಡಿ ಸುಸಜ್ಜಿತ 199 ಮನೆಗಳನ್ನು ನಿರ್ಮಿಸಿ ಕೊಟ್ಟಿತು. ಅಲ್ಲದೇ ಇಡೀ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಸಿದ್ದಗಂಗಾ ಶ್ರೀಗಳು ಅಚ್ಚುಕಟ್ಟಾಗಿ ಗ್ರಾಮವನ್ನು ಮರುಸೃಷ್ಟಿಸಿಕೊಟ್ಟಿದ್ದರು.

ರಾಯಚೂರು ಭಾಗದ ನೂರಾರು ವಿದ್ಯಾರ್ಥಿಗಳಿಗೆ ಮಠ ವಿದ್ಯೆ, ಅನ್ನದಾನ ಮಾಡುತ್ತಿದ್ದು, ಉಮಳಿಪನ್ನೂರು ಗ್ರಾಮಕ್ಕೆ ಶಿವಕುಮಾರ ಸ್ವಾಮಿಗಳು ಗ್ರಾಮದ ದೇವರಾಗಿದ್ದಾರೆ. ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ ಶ್ರೀಗಳ ಭಾವಚಿತ್ರವಿದ್ದು, ನಿತ್ಯ ಪೂಜೆ ನಡೆಯುತ್ತದೆ. ಮನೆ ನಿರ್ಮಿಸಿಕೊಟ್ಟ ಬಳಿಕ ಪ್ರತಿ ವರ್ಷ ಗ್ರಾಮದ ಜನ ತಪ್ಪದೇ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುವ ಸಂಪ್ರದಾಯವನ್ನು ಆರಂಭಿಸಿದ್ದಾರೆ. ಆದರೆ ಈಗ ಶ್ರೀಗಳು ಇನ್ನಿಲ್ಲ ಎನ್ನುವುದನ್ನು ಗ್ರಾಮಸ್ಥರಿಗೆ ಅರಗಿಸಿಕೊಳ್ಳಲು ಕಷ್ಟಸಾಧ್ಯವಾಗಿದೆ. ಇದನ್ನೂ ಓದಿ: ಕಾಣೆಯಾಗಿದೆ ಸದಾ ಶ್ರೀಗಳ ಜೊತೆ ಓಡಾಡುತ್ತಿದ್ದ ನಾಯಿ!

ಶಿವಕುಮಾರ ಸ್ವಾಮಿಜಿ ನೆನಪಿಗಾಗಿ ಗ್ರಾಮದಲ್ಲಿ ಅವರ ಮೂರ್ತಿಯನ್ನ ನಿರ್ಮಿಸಲು ಗ್ರಾಮಸ್ಥರು ಈಗ ಮುಂದಾಗಿದ್ದಾರೆ. ಗ್ರಾಮದಿಂದ 50 ಕ್ಕೂ ಹೆಚ್ಚು ಜನ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀಗಳ ಅಂತಿಮ ದರ್ಶನವನ್ನ ಪಡೆದು ಬಂದಿದ್ದಾರೆ. ಉಳಿದವರು ಗ್ರಾಮದಲ್ಲೇ ಶಿವಕುಮಾರ ಶ್ರೀಗಳಿಗೆ ಪೂಜೆ ಮಾಡಿ ನಮನ ಸಲ್ಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply