ಶೂಟಿಂಗ್ ವೇಳೆ ಇಬ್ಬರ ದುರ್ಮರಣ ಪ್ರಕರಣ- ತನಿಖೆ ವೇಳೆ ಸ್ಫೋಟಕ ಸತ್ಯ ಬಯಲು

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಭಿನಯದ `ರಣಂ’ ಚಿತ್ರದ ಶೂಟಿಂಗ್ ವೇಳೆ ಇಬ್ಬರು ದುರ್ಮರಣಕ್ಕೀಡಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸಪ್ಪನ ಹಣದ ದಾಹಕ್ಕೆ ಇಬ್ಬರು ಅಮಾಯಕರು ಬಲಿಯಾಗಿರುವುದು ಆಂತರಿಕ ತನಿಖೆ ವೇಳೆ ಸ್ಫೋಟಕ ಸತ್ಯ ಬಯಲಾಗಿದೆ.

ಶೂಟಿಂಗ್ಗೆ ಅನುಮತಿ ಇಲ್ಲದೇ ಹೋದರೂ 5 ಸಾವಿರ ಹಣ ಪಡೆದು ಪೇದೆ ಶೂಟಿಂಗ್ ಮಾಡಿಸಿದ್ದನು. ತನಿಖಾ ವರದಿ ಕೈ ಸೇರುತ್ತಿದ್ದಂತೆಯೇ ಪೊಲೀಸ್ ಪೇದೆಯನ್ನು ಅಮಾನತು ಮಾಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ. ಬಾಗಲೂರು ಠಾಣೆಯ ಪೇದೆಯಾಗಿದ್ದ ಭೀಮಾ ಶಂಕರ್ ಕೇವಲ 5,000 ರೂ. ಲಂಚ ಪಡೆದು ಇಬ್ಬರ ಸಾವಿಗೆ ಕಾರಣವಾಗಿದ್ದಾನೆ.

ಮಾರ್ಚ್ ತಿಂಗಳ 29ರಂದು ಬಾಗಲೂರಿನ ಶೆಲ್ ಕಂಪನಿ ಬಳಿ ‘ರಣಂ’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಆಗ ಸಿಲಿಂಡರ್ ಬ್ಲಾಸ್ಟ್ ಆಗಿ ಸಮೀರಾ ಬಾನು (28) ಹಾಗೂ ಆಕೆಯ ಮಗಳು ಆಯೇಶಾ ಮೃತಪಟ್ಟಿದ್ದರು. ಪ್ರಕರಣದ ತನಿಖೆ ವೇಳೆ ಪೊಲೀಸರಲ್ಲೇ ಆಂತರಿಕ ವೈಫಲ್ಯದ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಆಂತರಿಕ ತನಿಖೆ ನಡೆಸುವಂತೆ ಸೂಚಿಸಿದ್ದರು.

ಶೂಟಿಂಗ್‍ಗೆ ಯಾವುದೇ ಅನುಮತಿ ಇಲ್ಲದಿದ್ದರೂ ವೈಯಕ್ತಿಕವಾಗಿ ಭೀಮಾ ಶಂಕರ್ ಹಣ ಪಡೆದಿದ್ದನು. ಶೂಟಿಂಗ್ ನಡೆಸುವ ಮುನ್ನ ಚಿತ್ರದ ನಿರ್ದೇಶಕನ ಅನುಮತಿ ಕೋರಿ ಯಲಹಂಕ ಎಸಿಪಿ ಕಚೇರಿಗೆ ತೆರಳಿದ್ದರು. ಆದರೆ ಯಲಹಂಕ ಎಸಿಪಿ ಎಂಎಸ್ ಶ್ರೀನಿವಾಸ್ ಸೂಕ್ತ ದಾಖಲೆ ನೀಡುವವರೆಗೂ ಅನುಮತಿ ಇಲ್ಲ ಎಂದಿದ್ದರು. ಇದೇ ಸಮಯ ದುರುಪಯೋಗ ಪಡಿಸಿಕೊಂಡಿದ್ದ ಭೀಮಾ ಶಂಕರ್ ಚಿತ್ರತಂಡದಿಂದ ಐದು ಸಾವಿರ ಹಣ ಪಡೆದು ತಾನೇ ಸೆಕ್ಯೂರಿಟಿ ನೀಡುವ ರೀತಿ ಕೆಲಸ ಮಾಡಿದ್ದನು. ಯಾವುದೇ ಅನುಮತಿ ಇಲ್ಲದೆ ಚಿತ್ರೀಕರಣ ನಡೆಯುವ ವೇಳೆ ಸಿಲಿಂಡರ್ ಸ್ಫೋಟ ದುರಂತ ನಡೆದಿತ್ತು.

ಸದ್ಯಕ್ಕೆ ವಿದ್ಯಾರಣ್ಯಪುರ ಪೇದೆಯಾಗಿ ಭೀಮಾ ಶಂಕರ್ ಕಾರ್ಯನಿರ್ವಹಿಸುತ್ತಿದ್ದಾನೆ. ಈ ಬಗ್ಗೆ ವರದಿ ಬಂದ ಕೂಡಲೇ ಭೀಮಾ ಶಂಕರ್ ಅಮಾನತು ಮಾಡಲಾಗುತ್ತದೆ. ಈಶಾನ್ಯ ವಿಭಾಗದ ಡಿಸಿಪಿ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

Comments

Leave a Reply

Your email address will not be published. Required fields are marked *