ಆಪರೇಷನ್ ಕಮಲ ಮಾಡಲ್ಲ, ಸಮ್ಮಿಶ್ರ ಸರ್ಕಾರವನ್ನ ಬೀಳಿಸಲ್ಲ: ಶೋಭಾ ಕರಂದ್ಲಾಜೆ

ಉಡುಪಿ: ಬಿಜೆಪಿ ರಾಜ್ಯದಲ್ಲಿ ಆಪರೇಷನ್ ಕಮಲ ಮಾಡಲು ಹೋಗಲ್ಲ. ಸಮ್ಮಿಶ್ರ ಸರ್ಕಾರ ಮಾಡುತ್ತಿರುವ ಪಾಪಕ್ಕೆ ಅವರೇ ಬೀಳುತ್ತಾರೆ. ಮಂತ್ರಿ ಮಂಡಲ ವಿಸ್ತರಣೆಗಾಗಿ ಶಾಸಕರು ಕಾಯುತ್ತಿದ್ದಾರೆ. ಆದಷ್ಟು ಬೇಗ ಸಮ್ಮಿಶ್ರ ಸರ್ಕಾರ ಕೊನೆಗೊಳ್ಳಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಭವಿಷ್ಯ ನುಡಿದಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಭಿನ್ನಮತೀಯರ ಸಮಾಧಾನಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ನಾವು ಜೆಡಿಎಸ್ ಜೊತೆ ಹೋಗಲೇಬಾರದಿತ್ತು ಅಂತ ಕಾಂಗ್ರೆಸ್ ಶಾಸಕರೇ ನಮ್ಮಲ್ಲಿ ಹೇಳುತ್ತಿದ್ದಾರೆ. ಜೆಡಿಎಸ್ ಕಾಂಗ್ರೆಸ್ ನ್ನು ಒಂದು ದಿನ ತಿಂದು ಹಾಕುತ್ತೆ ಅನ್ನೋ ಭಯದಲ್ಲಿದ್ದಾರೆ. ಕಾಂಗ್ರೆಸ್ ನವರು ಹಿಂಬಾಗಿಲಿನ ಮೂಲಕ ಪಾಪದ ಕೃತ್ಯ ಎಸಗಿದ್ದಾರೆ. ನಮ್ಮೊಂದಿಗೆ ಹತ್ತಾರು ಶಾಸಕರು ಸಂಪರ್ಕದಲ್ಲಿದ್ದಾರೆ. ಆದರೆ ನಮಗೆ ಹೈಕಮಾಂಡ್ ನ ಆದೇಶವಿದೆ. ಹಾಗಾಗಿ ನಾವು ಸರ್ಕಾರ ಬೀಳಿಸಲ್ಲ ಎಂದಿದ್ದಾರೆ.

ಸಚಿವ ಜಮೀರ್ ಗೆ ರೈತರ ಬಗ್ಗೆ ಕಾಳಜಿ ಇಲ್ಲ. ಅವ್ಯವಹಾರ ಮಾಡಿದ ಅನುಭವಿಗಳಿಗೆ ಅಧಿಕಾರ ಸಿಕ್ಕಿದೆ. ಜಮೀರ್ – ಕುಮಾರಸ್ವಾಮಿ ಮೊನ್ನೆಯವರೆಗೆ ಹೇಗೆ ಕಿತ್ತಾಡಿದ್ದರು ಅನ್ನೋದನ್ನು ನಾವು ನೋಡಿದ್ದೀವಿ. ಯಾವ ರೀತಿ ಯಾವ ಭಾಷೆಯಲ್ಲಿ ಮಾತಾಡಿದ್ದರು ಅನ್ನೋದನ್ನು ಕೇಳಿದ್ದೇವೆ. ಅದೇ ಎಚ್.ಡಿ.ಕೆ ಕ್ಯಾಬಿನೆಟ್ ನಲ್ಲೇ ಇದೇ ಜಮೀರ್ ಈಗ ಮಂತ್ರಿ. ನಾವು ಕಾದು ನೋಡುತ್ತಿದ್ದೀವಿ ಅವರ ಜಗಳಕ್ಕೆ ಏನೇನಾಗುತ್ತೋ ನೋಡಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಇಂತಹದ್ದೇ ಕಾರು ಬೇಕೆನ್ನುವ ಮೂಲಕ ತನ್ನ ಜಮೀರ್ ಅಹ್ಮದ್ ಅಹಂ ಪ್ರದರ್ಶಿಸಿದ್ದಾರೆ. ಸರ್ಕಾರ ಇವರ ಮಾತಿಗೆ ಜಗ್ಗಬಾರದು. ಅವರಿಗೆ ಕೊಟ್ಟರೆ ಎಲ್ಲರಿಗೂ ಕೊಡುವ ಹಾಗೆ ಆಗಬೇಕು. ಹಾಗಾಗಿ ಜಮೀರ್ ಒತ್ತಾಯಕ್ಕೆ ಮಣೆ ಹಾಕಬೇಡಿ ಅಂತ ಸಚಿವ ಜಮೀರ್ ಅಹ್ಮದ್ ವಿರುದ್ಧ ಶೋಭಾ ವಾಗ್ದಾಳಿ ಮಾಡಿದರು.

Comments

Leave a Reply

Your email address will not be published. Required fields are marked *