ಭತ್ತದ ಗದ್ದೆಯಲ್ಲಿ ಕಳೆ ಕಿತ್ತು ರೈತರ ಹಿತ ಕಾಪಾಡುತ್ತೇನೆ ಎಂದ ಕೃಷಿ ಸಚಿವೆ

ಉಡುಪಿ: ಜಿಲ್ಲೆಯ ಕೇದಾರೋತ್ಥಾನ ಟ್ರಸ್ಟ್ ಮಾಡುತ್ತಿರುವ ಹಡಿಲು ಗದ್ದೆ ಬೇಸಾಯ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ಜನಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಕಡೆಕಾರು ಗದ್ದೆಯ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ.

ಶೋಭಾ ಕರಂದ್ಲಾಜೆಯವರು ಕಳೆದ 2 ದಿನಗಳಿಂದ ಉಡುಪಿ ಪ್ರವಾಸ ಮಾಡುತ್ತಿದ್ದಾರೆ. ಜನಾಶೀರ್ವಾದ ಯಾತ್ರೆಯ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಸದನ ನಡೆಸಲು ಬಿಡದ ಪಕ್ಷದ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 15ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಶೋಭಾ ಕರಂದ್ಲಾಜೆ ಭಾಗಿಯಾಗುತ್ತಿದ್ದಾರೆ. ಇದನ್ನೂ ಓದಿ:ಆಗಸ್ಟ್ 21 ರಿಂದ ರಾಯರ 350ನೇ ಆರಾಧನಾ ಮಹೋತ್ಸವ: ಸುಬುಧೇಂದ್ರ ತೀರ್ಥ ಸ್ವಾಮಿ

ಕೇದಾರೋತ್ಥಾನ ಟ್ರಸ್ಟ್, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 3,000 ಎಕರೆ ಗದ್ದೆಯಲ್ಲಿ ಈ ಬಾರಿ ಬೇಸಾಯ ಮಾಡಲಾಗುತ್ತಿದ್ದು, ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಈ ಅಭಿಯಾನ ನಡೆಯುತ್ತಿದೆ. ಕಡೆಕಾರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ನಾಟಿ ಕಾರ್ಯ ಮುಗಿಸಿದ್ದು, ಕಾಲೇಜು ವಿದ್ಯಾರ್ಥಿಗಳು ಕಳೆ ತೆಗೆಯುವ ಕೆಲಸದಲ್ಲಿ ತೊಡಗಿದ್ದಾರೆ. ಈ ಚಟುವಟಿಕೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದು, ವಿದ್ಯಾರ್ಥಿಗಳು ಶಾಸಕರ ಜೊತೆ ಗದ್ದೆಗಿಳಿದು ಕಳೆ ಕಿತ್ತಿದ್ದಾರೆ.

ಈ ಸಂದರ್ಭ ಮಾತನಾಡಿದ ಅವರು, ಒಬ್ಬ ಬಡ ರೈತನ ಮಗಳಿಗೆ ಕೇಂದ್ರ ಸಚಿವೆ ಆಗುವ ಅವಕಾಶವನ್ನು ಪ್ರಧಾನಿ ಮೋದಿ ಸರ್ಕಾರ ಕೊಟ್ಟಿದೆ. ರೈತರ ಕಷ್ಟ ಏನು ಎಂಬುದು ನನಗೆ ಸರಿಯಾಗಿ ಗೊತ್ತಿದೆ. ನಾಟಿ ಮಾಡಿ ಬೆಳೆ ಮಾರಾಟ ಆಗುವ ತನಕ, ಗ್ರಾಹಕರಿಗೆ ಕೈಸೇರುವ ತನಕ ಸಾಕಷ್ಟು ಸವಾಲುಗಳನ್ನು ರೈತರು, ಬೇಸಾಯಗಾರರು ಎದುರಿಸುತ್ತಾರೆ. ದೇಶದ ಬೆನ್ನೆಲುಬಾಗಿರುವ ರೈತರ ಕಷ್ಟ, ನಷ್ಟ ಅರಿತುಕೊಳ್ಳುವ ಕೆಲಸ ಮಾಡುತ್ತೇನೆ. ಹಡಿಲು ಗದ್ದೆ ಅಭಿಯಾನ ಉತ್ತಮ ಯೋಜನೆ. ರಾಜ್ಯ, ದೇಶದ ಜನ ಇದಕ್ಕೆ ಕೈ ಜೋಡಿಸಬೇಕು ಎಂದಿದ್ದಾರೆ. ಇದನ್ನೂ ಓದಿ:ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ- ಕೃಷ್ಣ ಮಠಕ್ಕೆ ಭೇಟಿ

ಇದೇ ವೇಳೆ ರಘುಪತಿ ಭಟ್ ಮಾತನಾಡಿ, ಹಲವಾರು ಜನನಾಯಕರು ಚಲನಚಿತ್ರ ನಟರು ಸಮಾಜದ ಗಣ್ಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಶೋಭಾ ಕರಂದ್ಲಾಜೆಯವರು ಕೃಷಿ ಚಟುವಟಿಕೆಯಲ್ಲಿ ಬಾಗಿಯಾಗಿದ್ದು, ಇಡೀ ದೇಶಕ್ಕೆ ಒಂದು ಉತ್ತಮ ಸಂದೇಶ ಹೋಗುತ್ತಿದೆ. ಅಭಿಯಾನದ ಉದ್ದೇಶ ಏನು ಎಂಬುದು ಇಡೀ ದೇಶದ ಜನಕ್ಕೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *