ವಿರಾಟ್ ವಿಕೆಟ್ ಕಬಳಿಸುವ ‘ಸುಲಭ ಸೂತ್ರ’ ಬಿಚ್ಚಿಟ್ಟ ಅಖ್ತರ್

ಇಸ್ಲಾಮಾಬಾದ್: ಪ್ರಸಕ್ತ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಇದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ವಿವಿಧ ಅಂತರರಾಷ್ಟ್ರೀಯ ತಂಡಗಳ ಅನೇಕ ಬೌಲರ್‌ಗಳಿಗೆ ವಿರಾಟ್ ಹೆಚ್ಚು ಮೌಲ್ಯಯುತ ವಿಕೆಟ್ ಆಗಿ ಉಳಿದಿದ್ದಾರೆ. ಆದರೆ ಹಿಂದಿನ ಪೀಳಿಗೆಯ ಅಪ್ರತಿಮ ವೇಗಿ, ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ಅವರು ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಸುಲಭ ಸೂತ್ರವನ್ನು ಬಿಚ್ಚಿಟ್ಟಿದ್ದಾರೆ.

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಅಖ್ತರ್ ಅತ್ಯುತ್ತಮ ಬೌಲರ್‍ಗಳಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಆಕ್ರಮಣಕಾರಿ ಬೌಲಿಂಗ್‍ನಿಂದ ಸಮಕಾಲಿನ ಅನೇಕ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಿತ್ತಿದ್ದರು. ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ ಮತ್ತು ಇತರ ಅನೇಕ ಶ್ರೇಷ್ಠ ಬ್ಯಾಟ್ಸ್‍ಮನ್‍ಗಳು ಅಖ್ತರ್ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಪರೇಡ್ ನಡೆಸಿದ್ದರು. ಆದರೆ ಪ್ರಸ್ತುತ ಭಾರತದ ನಾಯಕ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವ ಅವಕಾಶ ಅವರಿಗೆ ಸಿಗಲಿಲ್ಲ.

ಇನ್‍ಸ್ಟಾಗ್ರಾಮ್ ಲೈವ್‍ನಲ್ಲಿ ಮಾತನಾಡಿರುವ ಶೋಯೆಬ್ ಅಖ್ತರ್, ವಿರಾಟ್ ಕೊಹ್ಲಿ ಅವರನ್ನು ಹೇಗೆ ಔಟ್ ಮಾಡಬಹುದು ಎಂದು ವಿವರಿಸಿದ್ದಾರೆ. ಜೊತೆಗೆ ಸುಲಭ ಸೂತ್ರವನ್ನು ರಿವೀಲ್ ಮಾಡಿದ್ದಾರೆ. ಈ ಸೂತ್ರದ ಮೂಲಕ ಸುಲಭವಾಗಿ ಟೀಂ ಇಂಡಿಯಾ ನಾಯಕನ ವಿಕೆಟ್ ಪಡೆಯಬಹುದು ಎಂಬ ನಂಬಿಕೆ ನನ್ನಲ್ಲಿದೆ ಎಂದು ತಿಳಿಸಿದ್ದಾರೆ.

ನಾನು ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದಾದರೆ ಕ್ರೀಸ್‍ನಿಂದ ಅಗಲಕ್ಕೆ ಪಿಚ್ ಬೀಳುವಂತೆ ಮಾಡುತ್ತೇನೆ. ಈ ಮೂಕ ಡ್ರೈವ್ ಹೊಡೆಯುವ ಪ್ರಯತ್ನ ಮಾಡಿ ವಿಕೆಟ್ ಪಡೆಯುತ್ತೇನೆ. ಒಂದು ವೇಳೆ ನನ್ನ ಸೂತ್ರ ಕೆಲಸ ಮಾಡದಿದ್ದರೆ ನಾನು ಕೊಹ್ಲಿ ಅವರಿಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತೇನೆ. ಆಗ ಕೊಹ್ಲಿ ಔಟ್ ಆಗೇ ಆಗುತ್ತಾರೆ ಎಂದು ಅಖ್ತರ್ ವಿವರಿಸಿದ್ದಾರೆ.

ಶೋಯೆಬ್ ಅಖ್ತರ್ ಪಾಕಿಸ್ತಾನದ ಪರ 46 ಟೆಸ್ಟ್ ಪಂದ್ಯಗಳನ್ನು ಆಡಿ 25.69 ಸರಾಸರಿಯಲ್ಲಿ 178 ವಿಕೆಟ್ ಪಡೆದಿದ್ದಾರೆ. 163 ಏಕದಿನ ಪಂದ್ಯಗಳನ್ನು ಆಡಿ 24.97 ಸರಾಸರಿಯಲ್ಲಿ 247 ವಿಕೆಟ್ ಕಿತ್ತಿದ್ದಾರೆ.

ಅಖ್ತರ್ ಕ್ರಿಕೆಟ್ ಜಗತ್ತಿನಲ್ಲಿಯೇ ಅತ್ಯಂತ ಅಪಾಯಕಾರಿ ಬೌಲರ್‍ಗಳಲ್ಲಿ ಒಬ್ಬರಾಗಿದ್ದಾರೆ. ಅವರ ವೇಗ ಮತ್ತು ಆಕ್ರಮಣಕಾರಿ ತೀವ್ರತೆ ಹೇಗಿತ್ತೆಂದರೆ, ಯಾವುದೇ ಬ್ಯಾಟ್ಸ್‌ಮನ್‌ಗಳು ಚೆಂಡನ್ನು ಹೊಡೆಯಲು ಕಷ್ಟಪಡುತ್ತಿದ್ದರು. ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಎದುರಿಸಲು ಹೆದರುತ್ತಿದ್ದರು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ಈ ಹಿಂದೆ ಒಪ್ಪಿಕೊಂಡಿದ್ದರು.

Comments

Leave a Reply

Your email address will not be published. Required fields are marked *