ಜಯಲಲಿತಾರನ್ನು ಮೀರಿಸುವ ಮಾಯಾಂಗನೆಯಂತೆ ಹೋರಾಟ: ಶಿವರಾಮೇಗೌಡ

– ವಿರೋಧ ಪಕ್ಷದವರು ಟೂರಿಂಗ್ ಟಾಕೀಸ್
– ಎಂಪಿ ಗಿರಿ ಇಲ್ಲ ಅಂದ್ರೆ ನಾನು ಬೀದಿಗೆ ಬರಲ್ಲ

ಮಂಡ್ಯ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರನ್ನು ಮೀರಿಸುವ ಮಾಯಾಂಗನೆಯಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಸಂಸದ ಶಿವರಾಮೇಗೌಡ, ಸುಮಲತಾ ಅಂಬರೀಶ್ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ್ದಾರೆ.

ನಾಗಮಂಗಲ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದರು, ಟೂರಿಂಗ್ ಟಾಕೀಸ್‍ಗೆ ಮಾರು ಹೋಗಬೇಡಿ. ಎಲ್ಲರ ಮೇಲೆ ಆರೋಪ ಮಾಡುವ ನೀಚ ಬುದ್ಧಿ ಇರುವವರಿಗೆ ಅಧಿಕಾರ ಕೊಡಬೇಡಿ. ನಿಮ್ಮ ಸಾವಿಗೆ ಬರುವವರು ನಾವು. ನಿಮ್ಮ ಪಲ್ಲಕ್ಕಿ ಹೊರುವವರು ನಾವು. ವಿರೋಧ ಪಕ್ಷದವರು ಟೂರಿಂಗ್ ಟಾಕೀಸ್, ಅವರ ಸಿನಿಮಾವನ್ನು ದುಡ್ಡು ಕೊಟ್ಟು ನೋಡುತ್ತೇವೆ. ಅವರನ್ನು ನೋಡಲು ಹೋದವರೆಲ್ಲ ವೋಟ್ ಹಾಕಲ್ಲ. ಅವರ ಹಿಂದೆ ಓಡಾಡುವವರಿಗೆ ಯಾವ ಪಕ್ಷಕ್ಕೆ ಹೋಗಬೇಕು ಅಂತ ತೀರ್ಮಾನಿಸುವಂತೆ ಈಗಲೂ ಹೇಳುತ್ತೇನೆ ಎಂದು ಹೇಳಿದರು.

ಎಂಪಿ ಗಿರಿ ಇಲ್ಲ ಅಂದ್ರೆ ನಾನು ಬೀದಿಗೆ ಬರಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮನೆಯಲ್ಲೇ ಇರುತ್ತೇನೆ. ಇದು ನನ್ನ ಮರ್ಯಾದೆ ಪ್ರಶ್ನೆ. ನನ್ನ ಅಭಿಮಾನಿಗಳು ನನ್ನ ಮಾತು ಕೇಳದಿದ್ದರೆ ಅವರು ಅಭಿಮಾನಿಗಳೇ ಅಲ್ಲ ಎಂದರು.

ದಿಗ್ಗಜರು ಒಂದೇ ವೇದಿಕೆಯಲ್ಲಿ ಕುಳಿತು ಒಟ್ಟಿಗೆ ಹೋಗುವ ತೀರ್ಮಾನ ಕೈಗೊಂಡಿದ್ದಾರೆ. ಎಚ್.ಡಿ.ದೇವೇಗೌಡರ ಗರಡಿಯಲ್ಲೇ ಪಳಗಿ, ಯಾವುದೇ ಕೆಲಸ ಮಾಡಬಲ್ಲೇ ಎಂದು ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಜೊತೆಯಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಅವರನ್ನು ಗೆಲ್ಲಿಸಲು ಮುಂದಾದ ಸಚಿವ ಪುಟ್ಟರಾಜು ಅವರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಭಾರತದಲ್ಲಿ ಎಲ್ಲ ಕಡೆಯೂ ಚುನಾವಣೆ ನಡೆಯುತ್ತಿದೆ. ಆದರೆ ಮಾಧ್ಯಮ ಮಿತ್ರರು ಮಂಡ್ಯವನ್ನು ಹೈವೋಲ್ಟೇಜ್ ಕ್ಷೇತ್ರ ಮಾಡಿದ್ದಾರೆ. ಇದು ಬೇಕೇ? ಮಂಡ್ಯ ಜಿಲ್ಲೆಯನ್ನು ಮಾಧ್ಯಮದವರು ಪೆಡಂಭೂತ ಎಂಬ ರೀತಿ ಎಂಬಂತೆ ತೋರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ತೋರಿಸಿದ ರೀತಿ ಇನ್ಯಾರನ್ನೂ ತೋರಿಸಿಲ್ಲ. ಬಿಜೆಪಿಗೆ ಮಂಡ್ಯದಲ್ಲಿ ಅಭ್ಯರ್ಥಿ ಹಾಕಲು ಯೋಗ್ಯತೆಯಿಲ್ಲ. ಹಿಂಬಾಗಿಲ ಮೂಲಕ ಸಪೋರ್ಟ್ ಮಾಡಿದ್ದಾರೆ. ಕುಟುಂಬ ರಾಜಕಾರಣ ಅಂತಾರೆ, ಎಚ್.ಡಿ.ದೇವೇಗೌಡರ ಮೊಮ್ಮಕ್ಕಳು ರಾಜಕೀಯಕ್ಕೆ ಬರಬಾರದೇ ಎಂದು ಸಭೆಯಲ್ಲಿ ಸೇರಿದ್ದ ಜನರಿಗೆ ಪ್ರಶ್ನಿಸಿದರು.

ಸಭೆ ಆರಂಭವಾಗುವುದಕ್ಕೂ ಮುನ್ನ ವೇದಿಕೆ ಮೇಲಿದ್ದ ಬ್ಯಾನರ್‍ನಲ್ಲಿ ಮಾಜಿ ಶಾಸಕ ಚಲುವರಾಯಸ್ವಾಮಿ ಭಾವಚಿತ್ರವೇ ಇರಲಿಲ್ಲ. ಇದರಿಂದಾಗಿ ತಕ್ಷಣವೇ ಎಚ್ಚೆತ್ತುಕೊಂಡ ಸ್ಥಳೀಯ ಕೆಲ ಮುಖಂಡರು ಬ್ಯಾನರ್ ಅನ್ನು ತೆರವುಗೊಳಿಸಿದರು. ಸಭೆಯಲ್ಲಿ ಸೇರಿದ್ದ ಜನರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿಜವಾದ ಜೋಡೆತ್ತುಗಳು. ಬಣ್ಣ ಹಚ್ಚಿಕೊಳ್ಳುವವರಲ್ಲ ಜೋಡೆತ್ತುಗಳಲ್ಲ ಎಂದು ಘೋಷಣೆ ಕೂಗಿದರು.

Comments

Leave a Reply

Your email address will not be published. Required fields are marked *