ಕಾಂಗ್ರೆಸ್ ಕಾರ್ಯಕರ್ತರನ್ನು ಹದ್ದು ಬಸ್ತಿನಲ್ಲಿಡಿ, ಇಲ್ಲ ಅಂದ್ರೆ – ಶಿವರಾಮ್ ಹೆಬ್ಬಾರ್

ಕಾರವಾರ: ಕಾಂಗ್ರೆಸ್ ಪ್ರಚೋದನೆಯಿಂದ ನನ್ನ ಚುನಾವಣಾ ಪ್ರಚಾರಕ್ಕೆ ಅಡ್ಡಿಯಾಯಿತು. ಇದು ಬೆದರಿಸುವ ತಂತ್ರವಾಗಿದೆ. ಆದರೆ ನಾವು ಯಾರಿಗೂ ಹೆದರುವುದಿಲ್ಲ ಎಂದು ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಮುಂಡಗೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಎರಡು ದಿನಗಳ ಹಿಂದೆ ಪ್ರಚಾರ ಸಭೆಯಲ್ಲಿ ನಡೆದ ಗಲಾಟೆ ಕುರಿತು ಪ್ರತಿಕ್ರಿಯೆ ನೀಡಿದರು.

ಪ್ರಜಾಪ್ರಭುತ್ವದಲ್ಲಿ ನನ್ನ ಅನಿಸಿಕೆ ಹೇಳಿಕೊಳ್ಳಲು ನನಗೆ ಹಕ್ಕಿದೆ. ಆದರೆ ಕಾಂಗ್ರೆಸ್ ಪ್ರಚೋದನೆಯಿಂದ ಗಲಾಟೆ ಆಯಿತು. ಅದಕ್ಕಾಗಿ ಮಾರನೇ ದಿನ ದೇಶಪಾಂಡೆ ಕಾರ್ಯಕ್ರಮದಲ್ಲಿ ನಮ್ಮ ಕಾರ್ಯಕರ್ತರು ಗಲಾಟೆ ಮಾಡಿದರು. ನೀವು ಬಿಜೆಪಿ ನಾಯಕರಿಗೆ ತೊಂದರೆ ನೀಡಿದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕರಿಗೆ ತೊಂದರೆ ನೀಡುತ್ತಾರೆ ಎಂದರು.

ಉತ್ತರ ಕನ್ನಡ ಜಿಲ್ಲೆಯ ರಾಜಕಾರಣದಲ್ಲಿ ಇಂತಹ ಕಹಿ ಘಟನೆಗಳು ಎಂದಿಗೂ ನಡೆದಿಲ್ಲ. ಕಾಂಗ್ರೆಸ್ ಕಾರ್ಯಕರ್ತರನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಿ. ಸಭೆಗೆ ಬರಲು ಮನಸ್ಸಿಲ್ಲ ಎಂದರೆ ಬರುವುದು ಬೇಡ. ಗಲಾಟೆ ನೀವು ಮಾಡಿದಲ್ಲಿ ಅದು ನಮ್ಮವರಿಂದ ಮುಂದುವರಿಯುತ್ತದೆ. ಆದ ಕಾರಣ ಯಾರೂ ಮಾಡದಿರುವುದು ಉತ್ತಮ ಎಂದು ಕಾಂಗ್ರೆಸ್‍ಗೆ ಸಲಹೆ ನೀಡಿದರು.

ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ರಾಜ್ಯ, ರಾಷ್ಟ್ರ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿ ಕಾಂಗ್ರೆಸ್ ಸಹ ಪ್ರಚಾರ ಮಾಡುತ್ತಿದ್ದು, ಬಿಜೆಪಿ ಮತ್ತು ನನ್ನ ಕುರಿತು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ವೈಯಕ್ತಿಕ ತೇಜೋವಧೆಗೆ ಅವರು ಮುಂದಾಗಿದ್ದು, ನಾವೂ ತಿರುಗೇಟು ನೀಡಬೇಕಾಗುತ್ತದೆ. ನಾವು ಯಾರ ಗುಲಾಮರಲ್ಲ ಎಂದು ಪುನರುಚ್ಚರಿಸಿದರು.

Comments

Leave a Reply

Your email address will not be published. Required fields are marked *