ಕೊರೊನಾ ಭೀತಿಯ ನಡುವೆಯೂ ಮರಕಳ್ಳತನ – ಕಳ್ಳರಿಗೆ ಲಾಠಿ ಏಟು

ಶಿವಮೊಗ್ಗ: ಕೊರೊನಾ ವೈರಸ್ ಭೀತಿಗೆ ಈಡಿ ರಾಷ್ಟ್ರವೇ ತತ್ತರಿಸಿ ಹೋಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವೈರಸ್ ತಡೆಗಟ್ಟಲು 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.

ಪ್ರಧಾನಿ ಅವರ ಈ ಆದೇಶವನ್ನೇ ಬಂಡವಾಳ ಮಾಡಿಕೊಂಡ ಕೆಲ ಖದೀಮರು, ಲಾಕ್‍ಡೌನ್ ಇದೆ ಎಂದು ಕಾಡಿನತ್ತ ಯಾರೂ ಸಹ ತಲೆ ಹಾಕುವುದಿಲ್ಲ. ಇದೇ ಸಮಯದಲ್ಲಿ ಬೆಲೆ ಬಾಳುವ ಮರಗಳಿಗೆ ಕೊಡಲಿ ಹಾಕಿ ಮರಗಳ್ಳತನಕ್ಕೆ ಪ್ರಯತ್ನಿಸಿರುವ ಘಟನೆ ಶಿವಮೊಗ್ಗದ ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಈ ವೇಳೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದ ಅರಣ್ಯ ರಕ್ಷಕನ ಮೇಲೆ ಮರಗಳ್ಳರಾದ ರಾಜೇಂದ್ರ, ಮುರುಗೇಶ, ವಿರೇಂದ್ರ ಹಾಗೂ ಬಲರಾಮ್ ಸೇರಿ ಹಲ್ಲೆಗೆ ಮುಂದಾಗಿದ್ದಾರೆ. ಈ ಖದೀಮರು ಲಕ್ಷಾಂತರ ರೂ. ಬೆಲೆ ಬಾಳುವ ಮರಗಳಾದ ಸಾಗುವಾನಿ, ಬೀಟೆ ಸೇರಿದಂತೆ ಇತರೆ ಮರಗಳನ್ನು ಕಳ್ಳತನ ಮಾಡಿ ಶಿವಮೊಗ್ಗ ಮೂಲದ ಹಬೀಬ್ ಎಂಬುವನಿಗೆ ಮಾರಾಟಕ್ಕೆ ಯತ್ನಿಸಿದ್ದರು.

ಸದ್ಯ ಮೂವರು ಮರಗಳ್ಳರನ್ನು ವಶಕ್ಕೆ ಪಡೆದ ಅರಣ್ಯ ಸಿಬ್ಬಂದಿ ಬಂಧಿತರನ್ನು ಶಿವಮೊಗ್ಗ ವನ್ಯಜೀವಿ ವಲಯದ ಡಿಎಫ್‍ಒ ನಾಗರಾಜ್ ಮುಂದೆ ನಿಲ್ಲಿಸಿದ್ದಾರೆ. ಡಿಎಫ್‍ಒ ನಾಗರಾಜ್ ಮರಗಳ್ಳರಿಗೆ ಕರ್ಫ್ಯೂ ಇದ್ದರೂ ಮನೆಯಿಂದ ಹೊರ ಬಂದು ಮರಗಳ್ಳತನ ಮಾಡುತ್ತೀರಾ ಎಂದು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೂವರಿಗೂ ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೇ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೊರ್ವ ಪರಾರಿಯಾಗಿದ್ದು, ಆತನ ಪತ್ತೆಗೂ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *