ರೌಡಿಶೀಟರ್ ‌ಮೇಲೆ ಪೊಲೀಸರ ಗುಂಡಿನ‌ ದಾಳಿ – ಕಾಲಿಗೆ ಗುಂಡೇಟು

ಶಿವಮೊಗ್ಗ: ಬೆಳ್ಳಂಬೆಳಗ್ಗೆ ರೌಡಿಶೀಟರ್ (Rowdy Sheeter) ಕಾಲಿಗೆ ಪೊಲೀಸರು ಗುಂಡೇಟು ಹೊಡೆದ ಘಟನೆ ಶಿವಮೊಗ್ಗದ (Shivamogga) ಹೊರವಲಯದ ಮಲ್ಲಿಗೇನಹಳ್ಳಿ ಬಳಿ ನಡೆದಿದೆ.‌

ರೌಡಿಶೀಟರ್ ಪರ್ವೇಜ್ ಅಲಿಯಾಸ್ ಫಾರು ಪೊಲೀಸರ ಗುಂಡಿನ ದಾಳಿಗೆ ಒಳಗಾದ ಆರೋಪಿ. ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿ ಫಾರು ಪೊಲೀಸರಿಗೆ ಬೇಕಾಗಿದ್ದ. ಇದನ್ನೂ ಓದಿ: ನಡು ರಸ್ತೆಯಲ್ಲೇ ಹೊತ್ತಿ ಉರಿದ ಸ್ಪಿರಿಟ್ ಟ್ಯಾಂಕರ್ – ತಪ್ಪಿದ ಭಾರೀ ದುರಂತ

ಹಲವು ದಿನಗಳಿಂದ ಆರೋಪಿ ನಾಪತ್ತೆಯಾಗಿದ್ದ. ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಆರೋಪಿ ಫಾರು ಇಂದು ಮಲ್ಲಿಗೇನಹಳ್ಳಿ ಸಮೀಪ ಇರುವ ಬಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ ಪೊಲೀಸ್ ಸಿಬ್ಬಂದಿ ಮೇಲೆ ಚಾಕುವಿನಿಂದ ದಾಳಿ ನಡೆಸಲು ಮುಂದಾದ.

ಈ ವೇಳೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್‌ಐ ಸತ್ಯನಾರಾಯಣ ಅವರು ಆತ್ಮರಕ್ಷಣೆಗೆ ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದರು. ಘಟನೆಯಲ್ಲಿ ರೌಡಿಶೀಟರ್ ಫಾರು ಹಾಗೂ ಪೊಲೀಸ್ ಸಿಬ್ಬಂದಿ ನಾಗಪ್ಪ ಅವರಿಗೂ ಗಾಯವಾಗಿದೆ. ಇದನ್ನೂ ಓದಿ: ಪರೀಕ್ಷಾ ದಿನವೇ SSLC ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಇಬ್ಬರನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಎಸ್‌ಪಿ ಮಿಥುನ್ ಕುಮಾರ್ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸಿಬ್ಬಂದಿ ಆರೋಗ್ಯ ವಿಚಾರಿಸಿದರು. ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.