ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಕ್ಷೇತ್ರದಲ್ಲಿಗ ಮೇಯರ್ ಚುನಾವಣೆ ಕಗ್ಗಂಟಾಗಿ ಪರಿಣಮಿಸಿದೆ. ಅದರಲ್ಲೂ ಬಿಜೆಪಿಯ ಹಿರಿಯ ನಾಯಕ ಮತ್ತು ಸಚಿವ ಈಶ್ವರಪ್ಪನವರ ನಗರ ಕ್ಷೇತ್ರದಲ್ಲಿಯೇ ಬಹುಮತವಿರುವ ಬಿಜೆಪಿಗೆ ಮೇಯರ್ ಚುನಾವಣೆ ಕಗ್ಗಂಟಾಗಿದೆ.
ಬಿಜೆಪಿಯ ಇಬ್ಬರು ಮಹಿಳೆಯರು ಮೇಯರ್ ಸ್ಥಾನಕ್ಕಾಗಿ ಕಾನೂನು ಹೋರಾಟಕ್ಕೆ ಇಳಿದಿದ್ದು, ಇದೀಗ ಬಿಜೆಪಿಗೆ ಮತ್ತು ನಾಯಕರಿಗೆ ಮುಖಭಂಗ ಆದಂತಾಗಿದೆ. ಒಬ್ಬ ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರ ಎಸಿ ನ್ಯಾಯಾಲಯ ರದ್ದುಗೊಳಿಸಿದ್ದರೂ ಕೂಡ ಅದಕ್ಕೆ ಹೈಕೋರ್ಟಿನಲ್ಲಿ ತಡೆ ತರಲಾಗಿದ್ದು, ಇದೀಗ ನಾಳಿನ ಮೇಯರ್- ಉಪ ಮೇಯರ್ ಚುನಾವಣೆ ತಿಕ್ಕಾಟಕ್ಕೆ ಕಾರಣವಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಗೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಾಳೆ ನಡೆಯಲಿದ್ದು, ಹಿಂದುಳಿದ ವರ್ಗ ಬಿ ಮಹಿಳೆಗೆ ಮೇಯರ್ ಸ್ಥಾನ ಹಾಗೂ ಸಾಮಾನ್ಯ ಮಹಿಳೆಗೆ ಉಪಮೇಯರ್ ಸ್ಥಾನ ಮೀಸಲಾಗಿದೆ. ಆಡಳಿತ ಪಕ್ಷದ ಸುವರ್ಣ ಶಂಕರ್ ಮತ್ತು ಅನಿತಾ ರವಿಶಂಕರ್ ಅವರು ಸಂಭವನೀಯ ಅಭ್ಯರ್ಥಿಗಳಾಗಿದ್ದರು. ಇವರಿಬ್ಬರು ಬಿಜೆಪಿ ಪಕ್ಷದವರಾಗಿದ್ದರೂ ಸಹ ಇಲ್ಲಿ ಈಶ್ವರಪ್ಪ ಬಣ ಮತ್ತು ಯಡಿಯೂರಪ್ಪ ಅವರ ಬಣ ಎಂದು ಗುರುತಿಸಲಾಗಿದೆ.
ಸದಸ್ಯೆ ಅನಿತಾ ರವಿಶಂಕರ್ ಅವರು ಬಿಎಸ್‍ವೈ ಬಣವಾಗಿ ಗುರುತಿಸಿಕೊಂಡಿದ್ದು, ಮತ್ತೊಬ್ಬ ಸದಸ್ಯೆ ಸುವರ್ಣ ಶಂಕರ್ ಈಶ್ವರಪ್ಪನವರ ಬಣ ಎಂದು ಗುರುತಿಸಲಾಗಿದೆ. ಈಗಾಗಿ ಇವರಿಬ್ಬರು ಮೇಯರ್ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ. ಇದು ಇದೀಗ ತಿಕ್ಕಾಟಕ್ಕೆ ಕಾರಣವಾಗಿದೆ. ಜಾತಿ ಪ್ರಮಾಣ ಪತ್ರದ ವಿಚಾರವಾಗಿ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಇಲ್ಲಿನ ಶಿಸ್ತಿನ ಪಕ್ಷದ ನಾಯಕರಿಗೆ ಮುಖಭಂಗ ಅನುಭವಿಸುವಂತಾಗಿದೆ.

ಮೇಯರ್ ಸ್ಥಾನದ ಆಕಾಂಕ್ಷಿ ಸುವರ್ಣ ಶಂಕರ್ ಅವರ ಜಾತಿ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ರದ್ದುಗೊಳಿಸಿದ್ದಾರೆ. ಇದು ಸುವರ್ಣ ಶಂಕರ್ ಆಸೆಗೆ ತಣ್ಣೀರು ಎರಚಿದಂತಾಗಿದ್ದು, ಈ ಎಸಿ ಅವರ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಸುವರ್ಣ ಶಂಕರ್ ಈ ಆದೇಶಕ್ಕೆ ತಡೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಜಾತಿ ಪ್ರಮಾಣ ಪತ್ರ ಬೇಕು ಈ ಪ್ರಮಾಣ ಪತ್ರ ಪಡೆಯಲು ಅಭ್ಯರ್ಥಿಯು ಆದಾಯ, ವೃತ್ತಿ ಮತ್ತು ಮಾರಾಟ ತೆರಿಗೆದಾರರು ಆಗಿರಬಾರದು. ಭೂ ಹಿಡುವಳಿ 8 ಹೆಕ್ಟೇರ್ ಮೀರಿರಬಾರದು ಎಂಬ ತಾಂತ್ರಿಕ ದೋಷ ಇಟ್ಟುಕೊಂಡು ಇಬ್ಬರ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಎಂದು ಈಗಾಗಲೇ ದೂರು ಸಲ್ಲಿಕೆಯಾಗಿತ್ತು.
ಬಿಜೆಪಿ ನಾಯಕರ ಈ ಕಚ್ಚಾಟದ ಲಾಭ ಪಡೆಯಲು ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿರುವ ಯಮುನಾ ರಂಗೇಗೌಡರನ್ನು ಕಣಕ್ಕಿಳಿಸಿದೆ. ಒಂದು ವೇಳೆ ಬಿಜೆಪಿಯ ಇಬ್ಬರೂ ಮಹಿಳೆಯರ ನಾಮಪತ್ರ ತಿರಸ್ಕೃತವಾದರೆ ಪರಿಸ್ಥಿತಿ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ನಿಂದ ಮೇಯರ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಯಮುನಾ ರಂಗೇಗೌಡ ಈಗ ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಪ್ರಾದೇಶಿಕ ಆಯುಕ್ತರಿಗೆ ಈ ಬಗ್ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಅವಶ್ಯ ಬಿದ್ದರೆ ನ್ಯಾಯಾದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಯಾಗಿರುವ ಅನಿತಾ ರವಿಶಂಕರ್ ಬಿಸಿಎಂ ಬಿ ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಆದರೆ ಅವರ ಕುಟುಂಬ ಕೂಡ ಆದಾಯ, ವೃತ್ತಿ ತೆರಿಗೆ ಪಾವತಿದಾರರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಅವರ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಎಂದು ಕಾಂಗ್ರೆಸ್ ನವರು ಉಪ ವಿಭಾಗಾಧಿಕಾರಿಗೆ ಮನವಿ ಮಾಡಿದ್ದಾರೆ. ಆದರೆ ಅನಿತಾ ರವಿಶಂಕರ್ ಅವರು ಈಗಾಗಲೇ ಆ ಮೀಸಲಾತಿ ಅಡಿಯಲ್ಲಿ ಚುನಾಯಿತರಾಗಿದ್ದಾರೆ. ಹೀಗಾಗಿ ಅವರ ಪ್ರಮಾಣ ಪತ್ರವನ್ನು ರದ್ದುಗೊಳಿಸುವ ಅಧಿಕಾರ ಉಪವಿಭಾಗಾಧಿಕಾರಿಗೆ ಬರುವುದಿಲ್ಲ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಗುತ್ತದೆ ಎಂದು ಉಪವಿಭಾಗಾಧಿಕಾರಿ ಪ್ರಕಾಶ್ ತೀರ್ಪು ನೀಡಿದ್ದಾರೆ. ಒಂದು ವೇಳೆ ಈ ಕುರಿತು ಯಾರಾದರು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ಅನಿತಾ ರವಿಶಂಕರ್ ಅವರ ಸದಸ್ಯತ್ವಕ್ಕೆ ಧಕ್ಕೆ ಬರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ ದಾಖಲಾತಿ ಪರಿಶೀಲಿಸಿ ಸುವರ್ಣ ಶಂಕರ್ ಅವರ ಪ್ರಮಾಣ ಪತ್ರ ರದ್ದುಗೊಳಿಸಲಾಗಿದೆ. ಸುವರ್ಣ ಶಂಕರ್ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಚುನಾವಣೆ ಸಂದರ್ಭ ಅವರಿಗೆ ಜಾತಿ ಪ್ರಮಾಣ ಪತ್ರದ ಅಗತ್ಯವಿರಲಿಲ್ಲ. ಮೇಯರ್ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ತಹಶೀಲ್ದಾರ್ ಅವರಿಂದ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಆದರೆ ಸುವರ್ಣ ಶಂಕರ್ ಕುಟುಂಬ ಆದಾಯ ತೆರಿಗೆ ನಿಯಮದ ಅಡಿಗೆ ಬರುವುದರಿಂದ ಅವರ ಪ್ರಮಾಣ ಪತ್ರವನ್ನು ಉಪವಿಭಾಗಾಧಿಕಾರಿ ರದ್ದುಗೊಳಿಸಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ಒಳಗಿನ ಆಂತರಿಕ ಕಿತ್ತಾಟದಿಂದಾಗಿ ಯಾರಿಗೂ ಗೊತ್ತೇ ಇರದ ಈ ಇಬ್ಬರು ಬಿಜೆಪಿ ಸದಸ್ಯರ ಮೀಸಲಾತಿ ವಿಚಾರ ಈಗ ಬಹಿರಂಗವಾದಂತಾಗಿದೆ. ವಿರೋಧ ಪಕ್ಷ ಕಾಂಗ್ರೆಸ್‍ಗೆ ಜಿಲ್ಲೆಯಲ್ಲಿ ಹೋರಾಟಕ್ಕೆ ಒಂದು ಅಸ್ತ್ರವನ್ನು ಬಿಜೆಪಿಯವರೇ ನೀಡಿದಂತಾಗಿದೆ. ರಾಜಕೀಯ ದಿಗ್ಗಜ ನಾಯಕರ ಕ್ಷೇತ್ರದಲ್ಲಿಯೇ ಇದೀಗ ಮೇಯರ್ ಸ್ಥಾನಕ್ಕೆ ಕಚ್ಚಾಟ ನಡೆಯುತ್ತಿರುವುದು ಅವಮಾನಕ್ಕೆ ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪಾಲಿಕೆಯ ಸದಸ್ಯರ ಬಲ: ಶಿವಮೊಗ್ಗ ಮಹಾನಗರ ಪಾಲಿಕೆಯ 35 ಸದಸ್ಯ ಬಲದಲ್ಲಿ ಬಿಜೆಪಿ 20, ಕಾಂಗ್ರೆಸ್ 7, ಜೆ.ಡಿ.ಎಸ್ 2, ಪಕ್ಷೇತರರು 6 ಸದಸ್ಯರಿದ್ದಾರೆ. ಇದರಲ್ಲಿ ಪಕ್ಷೇತರರಲ್ಲಿ 4 ಜನ ಬಿಜೆಪಿಗೆ ಸೇರ್ಪಡೆಯಾಗಿದ್ದು, ಬಿಜೆಪಿ ಪರವಾಗಿದ್ದಾರೆ. ಮತ್ತಿಬ್ಬರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದು, ಮತ್ತೊಬ್ಬರು ಪಕ್ಷೇತರರಾಗಿಯೇ ಉಳಿದುಕೊಂಡಿದ್ದಾರೆ. ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಕೂಡ ಮೇಯರ್ ಆಯ್ಕೆ ಕಗ್ಗಂಟಾದಂತಾಗಿದೆ.

Leave a Reply