ಬೈಕ್‌ ಚಲಾಯಿಸಿದ ಅಪ್ರಾಪ್ತ- ತಾಯಿಗೆ 30 ಸಾವಿರ ದಂಡ!

ಶಿವಮೊಗ್ಗ: ಅಪ್ರಾಪ್ತನಿಗೆ ಬೈಕ್​ ಚಲಾಯಿಸಲು ಕೊಟ್ಟ ಕಾರಣಕ್ಕೆ ವಾಹನ ಮಾಲೀಕರಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ 30 ಸಾವಿರ ರೂಪಾಯಿ ದಂಡ ವಿಧಿಸಿದೆ. 3ನೇ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

2024 ರ ಜನವರಿ 30 ರಂದು ಶಿವಮೊಗ್ಗ ಪೂರ್ವ ಸಂಚಾರಿ‌ ಠಾಣೆ ಪಿಎಸ್ ಐ ನವೀನ್ ಕುಮಾರ್ ಮಠಪತಿ ಅವರು ಶಿವಮೊಗ್ಗ ನಗರದ ಎಸ್ ಪಿ.ಎಂ ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ 17 ವರ್ಷದ ಹುಡುಗನೊಬ್ಬ ಮೊಪೆಡ್ ಅನ್ನು ಚಾಲನೆ ಮಾಡಿಕೊಂಡು ಬಂದಿದ್ದಾನೆ.

ಇದನ್ನ ಗಮನಿಸಿದ ಪಿಎಸ್​ಐ ಅಪ್ರಾಪ್ತನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ತಾಯಿ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿದ್ದರು. ಪ್ರಕರಣ ಸಂಬಂಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು. ಇದೀಗ ಕೋರ್ಟ್‌ ಮೊಪೆಡ್ ವಾಹನದ ಮಾಲೀಕರಿಗೆ 30 ಸಾವಿರ ರೂ ದಂಡ ವಿಧಿಸಿದೆ.