ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ

– ದೆಹಲಿ ಉದ್ಯಮಿಯಿಂದ ಬೆಳ್ಳಿ ವಿಗ್ರಹ ಸಮರ್ಪಣೆ

ತುಮಕೂರು: ತ್ರಿವಿಧ ದಾಸೋಹಿ, ಪರಮಪೂಜ್ಯ ಶಿವೈಕ್ಯ ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹವನ್ನು ಇಂದು ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಹಳೇ ಮಠದಲ್ಲಿ ಬೆಳ್ಳಿ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು. ಸಿದ್ಧಗಂಗಾ ಸ್ವಾಮಿಜಿಗಳು ಸೇರಿದಂತೆ ಹಲವು ಮಠಾಧೀಶರು ಮಂತ್ರಘೋಷಗಳ ಮೂಲಕ ಮಂಗಳಾರತಿ ಮಾಡಿದರು. ಬಳಿಕ ಮಠದಿಂದ ಮೆರವಣಿಗೆ ಹೊರಟು ಉದ್ದಾನೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ, ಅಲ್ಲಿಂದ ಶಿವಕುಮಾರ ಶ್ರೀಗಳ ಗದ್ದುಗೆಗೆ ಮೆರವಣಿಗೆ ತಲುಪಿತು. ಅಲ್ಲಿ ಗದ್ದುಗೆ ಸುತ್ತ ಐದು ಪ್ರದಕ್ಷಿಣೆ ಆದ ಬಳಿಕ ನೇರವಾಗಿ ಗದ್ದುಗೆಯ ಪೀಠದ ಮೇಲೆ ಬೆಳ್ಳಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.

ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗದ್ದುಗೆ ಪೀಠವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಪೀಠದ ಕೆಳಭಾಗದಲ್ಲಿ ಶ್ರೀಗಳ ಪಾದುಕೆ, ಸ್ವಲ್ಪ ಮೇಲ್ಭಾಗದಲ್ಲಿ ಶಿವಲಿಂಗ ಈಗಾಗಲೇ ಪ್ರತಿಷ್ಠಾಪನೆ ಮಾಡಲಾಗಿತ್ತು. ಶಿವಲಿಂಗದ ಹಿಂಭಾಗದ ಮೇಲ್ಭಾಗದಲ್ಲಿ ಶ್ರೀಗಳ ಭಾವಚಿತ್ರ ಇರಿಸಲಾಗಿತ್ತು. ಈ ಭಾವ ಚಿತ್ರ ತೆರವುಗೊಳಿಸಿ ಅದರ ಜಾಗದಲ್ಲಿ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.

ಗದ್ದುಗೆ ಪೀಠದಲ್ಲಿ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆಯಾಗುತ್ತಿದ್ದಂತೆ ಸಾಕ್ಷಾತ್ ಶಿವಕುಮಾರ ಶ್ರೀಗಳೇ ಬಂದು ಕುಂತ ಅನುಭವ ಭಕ್ತಾಧಿಗಳಲ್ಲಿ ಕಂಡಿದೆ. ಇಂದು ಶ್ರೀಗಳು ಲಿಂಗೈಕ್ಯರಾಗಿ 1 ವರ್ಷವಾಗಿದೆ. ಹಾಗಾಗಿ ಶ್ರೀಮಠದ ಭಕ್ತರಾದ ದೆಹಲಿ ಮೂಲದ ಉದ್ಯಮಿ ಮುಕೇಶ್ ಗರ್ಗ್ ಭಕ್ತಿಪೂರ್ವಕವಾಗಿ ಸಮರ್ಪಿಸಿದ ಬೆಳ್ಳಿ ವಿಗ್ರಹ ಇದಾಗಿದೆ.

Comments

Leave a Reply

Your email address will not be published. Required fields are marked *