ಮುಂದೆ ಡಿಕೆಶಿಗೆ ಸಿಎಂ ಪಟ್ಟ| ಹೇಳಿಕೆ ನೀಡಿದ್ದ ರಂಗನಾಥ್, ಶಿವರಾಮೇಗೌಡರಿಗೆ ಕಾಂಗ್ರೆಸ್‌ನಿಂದ ನೋಟಿಸ್‌

ಬೆಂಗಳೂರು: ಕುಣಿಗಲ್ ಕಾಂಗ್ರೆಸ್ ಶಾಸಕ, ಡಿಸಿಎಂ ಡಿಕೆ ಶಿವಕುಮಾರ್‌ ಸಂಬಂಧಿ ಡಾ.ರಂಗನಾಥ್ (Ranganath) ಮತ್ತು ಮಾಜಿ ಸಂಸದ ಎಲ್‌ಆರ್‌ ಶಿವರಾಮೇಗೌಡರಿಗೆ (Shivaramegowda) ಕಾರಣ ಕೇಳಿ ಕೆಪಿಸಿಸಿ ಶಿಸ್ತುಪಾಲನ ಸಮಿತಿ ನೋಟಿಸ್ ಜಾರಿ ಮಾಡಿದೆ.

ನೋಟಿಸ್‌ ತಲುಪಿದ ಒಂದು ವಾರದ ಒಳಗಡೆ ಉತ್ತರ ನೀಡುವಂತೆ ಶಿಸ್ತುಪಾಲನ ಸಮಿತಿ ಮುಖ್ಯಸ್ಥ, ಮಾಜಿ ಕೇಂದ್ರ ಸಚಿವ ರೆಹಮಾನ್‌ ಖಾನ್‌ ಸೂಚಿಸಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?
ಮಾಧ್ಯಮಗಳಿಗೆ ಮುಖ್ಯಮಂತ್ರಿಗಳ (Chief Minister) ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಗೊಂದಲ ಹಾಗೂ ಪಕ್ಷಕ್ಕೆ ಮುಜುಗರ ಉಂಟಾಗುವ ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದೆಂದು ಎಐಸಿಸಿ ಸೂಚನೆ ಇದ್ದಾಗ್ಯೂ ತಾವು ಈ ಬಗ್ಗೆ ಹೇಳಿಕೆ ನೀಡಿದ್ದೀರಿ.

 

ಈ ವಿಷಯದಲ್ಲಿ ನಿಮ್ಮ ಮಾಧ್ಯಮ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೆ, ಪಕ್ಷದ ಶಿಸ್ತು ಉಲ್ಲಂಘನೆಗೆ ಕಾರಣವಾಗುತ್ತದೆ. ತಮ್ಮ ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕಾರಣ ಕೇಳಿ ನೋಟೀಸು ನೀಡಲಾಗಿದೆ. ತಾವುಗಳು ಈ ನೋಟಿಸ್‌ ತಲುಪಿದ ಒಂದು ವಾರದ ಒಳಗಾಗಿ ತಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡಲು ಸೂಚಿಸಲಾಗಿದೆ. ಇದನ್ನೂ ಓದಿ: ಪವರ್ ಶೇರಿಂಗ್ ವಿಚಾರ; ಸಿಎಂ ಏನು ಹೇಳಿದ್ದಾರೆ ಅಷ್ಟೇ: ಡಿಕೆಶಿ

ರಂಗನಾಥ್ ಹೇಳಿದ್ದೇನು?
ಡಿ.ಕೆ.ಶಿವಕುಮಾರ್ ಅವರ ಶಕ್ತಿ ಮತ್ತು ಶ್ರಮವನ್ನು ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಿ, ಸೂಕ್ತ ಸ್ಥಾನಮಾನ ನೀಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ 140 ಸ್ಥಾನಗಳನ್ನು ಗೆದ್ದಿರುವುದ ಹಿಂದೆ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಹಾಗೂ ಶ್ರಮವಿದೆ. ಶಿವಕುಮಾರ್ ಅವರು ಒಂದಲ್ಲೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಅವರು ಮುಂದೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದರು.

ಶಿವರಾಮೇಗೌಡ ಹೇಳಿದ್ದೇನು?
ಮುಂಬರುವ ನವೆಂಬರ್ ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗುವುದು ಗ್ಯಾರಂಟಿ ಎಂದು ಕರ್ನಾಟಕ ಕಾಂಗ್ರೆಸ್‌ ಮಾಧ್ಯಮ ವಕ್ತಾರ ಎಲ್.ಆರ್.ಶಿವರಾಮೇಗೌಡ ಭವಿಷ್ಯ ನುಡಿದಿದದ್ದರು. ಹೈಕಮಾಂಡ್ ಸಮ್ಮುಖದಲ್ಲಿ ಆಗಿರುವ ಅಧಿಕಾರ ಹಂಚಿಕೆ ಸೂತ್ರದಂತೆ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದದ್ದರು.