ಮಕ್ಕಳಿಗೆ ನೀಡಿದ ಊಟ, ವಿದ್ಯೆಯಲ್ಲಿ ಶ್ರೀಗಳು ಇದ್ದಾರೆ: ಶಿವಣ್ಣ

ಬೆಂಗಳೂರು: ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಮಕ್ಕಳಿಗೆ ಕೊಟ್ಟಿರುವ ವಿದ್ಯೆ ಮತ್ತು ಊಟದಲ್ಲಿದ್ದಾರೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ಶ್ರೀಗಳ ಅಗಲಿಕೆಯ ಸುದ್ದಿ ತಿಳಿದು ಬೇಸರ ವ್ಯಕ್ತಪಡಿಸಿದ ನಟ ಶಿವಣ್ಣ, ಕಾರಣಾಂತರದಿಂದ ಶ್ರೀಗಳ ಅಂತಿಮ ದರ್ಶನಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಶ್ರೀಗಳ ಅಗಲಿಕೆ ಸಂತಾಪ ಸೂಚಿಸಿದ್ದಾರೆ.

“ಶ್ರೀಗಳು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳುವುದಕ್ಕೆ ನಾನು ಇಷ್ಟ ಪಡುವುದಿಲ್ಲ. ಅವರ ನೆನಪು ನಮ್ಮಲ್ಲಿದೆ. ಅವರು ಇಲ್ಲ ಎಂದು ಊಹಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಇವತ್ತು ನಮ್ಮನ್ನು ಬಿಟ್ಟು ಶ್ರೀಗಳು ಶಿವನ ಪಾದ ಸೇರಿದ್ದಾರೆ. ಇದರಿಂದ ಎಲ್ಲರಿಗೂ ನೋವಾಗಿದೆ. ಆದರೆ ಶ್ರೀಗಳು ಅಲ್ಲಿಂದ ನಮಗೆ ಆಶೀರ್ವಾದ ಮಾಡುತ್ತಿರುತ್ತಾರೆ. ಜೊತೆಗೆ ನಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ ಎಂದು ಶಿವಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿ ಮಠ ನಿರ್ಮಾಣ ಮಾಡಿ ಅಲ್ಲಿ ಸಾವಿರಾರು ಮಕ್ಕಳಿಗೆ ಆಶ್ರಯ ಕೊಟ್ಟಿದ್ದಾರೆ. ಆಶ್ರಯದ ಜೊತೆಗೆ ವಿದ್ಯಾರ್ಥಿಗಳಿಗೆ ವಿದ್ಯೆ, ಊಟ ಕೊಟ್ಟಿದ್ದಾರೆ. ಆ ವಿದ್ಯೆ ಮತ್ತು ಊಟದಲ್ಲಿ ಶ್ರೀಗಳು ಇದ್ದಾರೆ. ಅಷ್ಟೇ ಅಲ್ಲದೇ ಇಡೀ ಕರ್ನಾಟಕದ ಜನತೆಯ ಹೃದಯದಲ್ಲಿ ನೆಲೆಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಶ್ರೀಗಳ  ಸಾವಿನಿಂದ ನನಗೆ ತುಂಬಾ ನೋವಾಗಿದೆ. ಆದರೆ ಅಮೆರಿಕದ ಕಾರ್ಯಕ್ರಮವೊಂದರಲ್ಲಿ ಇದ್ದೇನೆ. ಆದ್ದರಿಂದ ನಾನು ಬರುವುದಕ್ಕೆ ಆಗುತ್ತಿಲ್ಲ. ಶ್ರೀಗಳ ಸಾವಿನ ಸುದ್ದಿ ಕೇಳಿದ ತಕ್ಷಣ ಬೇಸರವಾಯಿತು. ಅವರು ಮಾತನಾಡುವ ರೀತಿ ತುಂಬಾ ಇಷ್ಟವಾಗಿತ್ತು. ಇಂದಿಗೂ ಅವರ ಮಾತನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಶ್ರೀಗಳು ನಮ್ಮನ್ನು ಬಿಟ್ಟು ಹೋಗಿಲ್ಲ, ಸದಾ ನಮ್ಮ ಮನದಲ್ಲಿ ಇರುತ್ತಾರೆ ಎಂದು ಶಿವರಾಜ್ ಕುಮಾರ್ ಹೇಳಿದರು.

https://www.youtube.com/watch?v=zUXukC5M7Fc

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *