ಬಿಜೆಪಿ ನೇತೃತ್ವದ ಒಕ್ಕೂಟದಿಂದ ಶಿವಸೇನೆ ಹೊರ ನಡೆಯುತ್ತಾ? ಉದ್ಧವ್ ಠಾಕ್ರೆ ಹೇಳಿದ್ದೇನು?

ಮುಂಬೈ: ಲೋಕಾಸಭಾ ಉಪಚುನಾವಣೆಯ ಸೋಲಿನ ಬಳಿಕ ಬಹುಕಾಲದ ಮಿತ್ರ ಪಕ್ಷ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಯಿಂದ ಶಿವಸೇನೆ ಹೊರಬರಲು ನಿರ್ಧರಿಸಿದೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಆದರೆ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಯಾವುದೇ ಸ್ಪಷ್ಟನೆ ನೀಡದೇ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಜಾರಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ನಾವು ಜನರ ಪ್ರಶ್ನೆಗಳಿಗೆ ಉತ್ತರಿಸಲು ಬಂದಿದ್ದು, ನಿಮ್ಮ ಪ್ರಶ್ನೆಗೆ ಉತ್ತರಿಸಲು ಅಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ.

ಇದೇ ವೇಳೆ ಮಹಾರಾಷ್ಟ್ರದ ಪಾಲ್ಘಾರ್ ಕ್ಷೇತ್ರದ ಮತ ಎಣಿಕೆ ಹಾಗೂ ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಆರೋಪ ಮಾಡಿದರು. ಕೇಂದ್ರ ಚುನಾವಣೆಯ ಆಯೋಗ ಸರ್ಕಾರದ ನಡುವೆ ಸಿಕ್ಕಿ ನಲುಗಿದೆ. ಅದ್ದರಿಂದ ಆಯೋಗಕ್ಕೆ ಅಧಿಕಾರಿಗಳನ್ನು ನೇಮಕ ಮಾಡುವ ಬದಲು ಚುನಾವಣೆಯ ಮೂಲಕ ಆಯ್ಕೆ ಮಾಡುಬೇಕು ಎಂದು ಸಲಹೆ ನೀಡಿದರು. ಅಲ್ಲದೇ ಸದ್ಯ ಚುನಾವಣೆಯ ಫಲಿತಾಂಶ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು.

ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಠಾಕ್ರೆ, ಯೋಗಿ ಸರ್ಕಾರ ಉತ್ತರ ಪ್ರದೇಶದಲ್ಲೇ ತನ್ನ ಸ್ಥಾನಗಳನ್ನು ಬಿಜೆಪಿ ಕಳೆದುಕೊಳ್ಳುತ್ತಿದೆ. ವಿಪರ್ಯಾಸ ಎಂದರೇ ಯೋಗಿ ಆದಿತ್ಯನಾಥ್ ಮಹಾರಾಷ್ಟ್ರಕ್ಕೆ ಬಂದು ಪ್ರಚಾರ ನಡೆಸುತ್ತಾರೆ ಎಂದು ವ್ಯಂಗ್ಯವಾಡಿದರು.

ಉದ್ಧವ್ ಠಾಕ್ರೆ ಸುದ್ದಿಗೋಷ್ಠಿಯ ಬಳಿಕ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಶಿವಸೇನಾ ಮೈತ್ರಿ ವಿರುದ್ಧ ನಾವಿಲ್ಲ. ನಾವು ಶಿವಸೇನೆಯ ಜೊತೆಗೆ ಮಾತುಕತೆಗೆ ಸಿದ್ಧವಿದ್ದೇವೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಪಾಲ್ಘಾರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಂದ್ರ ಗವಿತೆ ಗೆಲುವು ಪಡೆದಿದ್ದು, ಶಿವಸೇನೆ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ವನಗಾ ಸೋಲುಂಡಿದ್ದಾರೆ. ಈಗಾಗಲೇ 2019ರಲ್ಲಿ ಸ್ವತಂತ್ರವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶಿವಸೇನೆ ಘೋಷಿಸಿದ್ದು ಈ ನಿರ್ಧಾರದ ಚುನಾವಣಾ ಫಲಿತಾಂಶ ಪರಿಣಾಮ ಬೀರಿದೆ ಎನ್ನುವ ಲೆಕ್ಕಾಚಾರಗಳು ಆರಂಭವಾಗಿದೆ. ಇನ್ನು ಕ್ಷೇತ್ರದಲ್ಲಿ ಸಂಸದ ಚಿಂತಾಮನ್ ವನಗಾ ಸಾವಿನಿಂದ ಉಪಚುನಾವಣೆ ನಡೆದಿತ್ತು. ಶಿವಸೇನೆಯಿಂದ ಚಿಂತಾಮನ್ ಪುತ್ರ ಶ್ರೀನಿವಾಸ್ ವನಗಾ ಬಿಜೆಪಿ ತೊರೆದು ಶಿವಸೇನೆಯಿಂದ ಸ್ಪರ್ಧಿಸಿ ಸೋತಿದ್ದಾರೆ.

ಶಿವಸೇನೆ ಪಕ್ಷವು ಎನ್‍ಡಿಎ ಒಕ್ಕೂಟದ ಅತ್ಯಂತ ಹಳೆಯ ಪಕ್ಷವಾಗಿದ್ದು, 1990ರ ದಶಕದಲ್ಲಿ ಎರಡು ಪಕ್ಷಗಳು ಮಹಾರಾಷ್ಟ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಧಿಕಾರ ಪಡೆದಿದ್ದವು. 2014 ರ ಲೋಕಸಭಾ ಚುನಾವಣೆಯ ವೇಳೆಯಲ್ಲೂ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಲು ಶಿವಸೇನೆ ಪಕ್ಷವು ಮಹತ್ವದ ಪಾತ್ರವಹಿಸಿತ್ತು. ಆದರೆ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಸ್ಥಾಪನೆಯಾದ ಬಳಿಕ ಶಿವಸೇನೆ ಹಾಗೂ ಬಿಜೆಪಿ ಮಧ್ಯೆ ಆಗಾಗ ವೈಮನಸ್ಸು ಕಾಣಿಸಿಕೊಂಡಿತ್ತು. ತದನಂತರ ಉಂಟಾದ ಬೆಳವಣಿಗೆಗಳಲ್ಲಿ ಶಿವಸೇನೆ ಮುಖ್ಯಸ್ಥರಾದ ಉದ್ಧವ್ ಠಾಕ್ರೆ ಬಿಜೆಪಿಯ ಹಲವು ನೀತಿಗಳನ್ನು ನೇರವಾಗಿ ಟೀಕಿಸಿ ಅಸಮಾಧಾನವನ್ನು ಹೊರಹಾಕುತ್ತಿದ್ದರು.

ಮಹಾರಾಷ್ಟ್ರದ ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿತ್ತು. ಅದರೂ ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಮುಂದುವರಿಸಿದ್ದು ಮುಂಬೈ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಎರಡು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿತ್ತು. ಈ ವೇಳೆಯೇ ಶಿವಸೇನೆ ಎನ್‍ಡಿಎ ಒಕ್ಕೂಟದಿಂದ ಹೊರಬರುವ ಸೂಚನೆಯನ್ನು ನೀಡಿತ್ತು. 2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಒಟ್ಟು 288 ಸ್ಥಾನಗಳ ಪೈಕಿ ಬಿಜೆಪಿ 122ರಲ್ಲಿ ಜಯಗಳಿಸಿದ್ದರೆ, ಶಿವಸೇನೆ 63ರಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ 42, ಎನ್‍ಸಿಪಿ, 41, ಇತರೇ 20 ಸ್ಥಾನಗಳಲ್ಲಿ ಜಯಗಳಿಸಿತ್ತು.

2014ರ ಲೋಕಸಭಾ ಚುನಾವಣೆಯ ವೇಳೆ ಮಹಾರಾಷ್ಟ್ರದ ಒಟ್ಟು 48 ಕ್ಷೇತ್ರಗಳಲ್ಲಿ ಬಿಜೆಪಿ 23, ಶಿವಸೇನೆ 18, ಎನ್‍ಸಿಪಿ 4, ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. 42 ಲೋಕಸಭಾ ಕ್ಷೇತ್ರಗಳು ಎನ್‍ಡಿಎ ಪಾಲಾಗಿದ್ದರೆ, 6 ಸ್ಥಾನಗಳು ಯುಪಿಎ ಪಾಲಾಗಿತ್ತು.

Comments

Leave a Reply

Your email address will not be published. Required fields are marked *