ಮುಂದುವರಿದ ‘ಮಹಾ’ ನಾಟಕ- ಫೈವ್ ಸ್ಟಾರ್ ಹೋಟೆಲಿನಲ್ಲಿ ಮೂರು ಪಕ್ಷಗಳ ಶಕ್ತಿ ಪ್ರದರ್ಶನ

-ಕರ್ನಾಟಕದಲ್ಲಿ ನಡೆದಂತೆ ಇಲ್ಲಿ ನಡೆಯಲ್ಲ
-ಗೆಳೆಯರ ಸಂಖ್ಯೆ ಹೆಚ್ಚಾಗಿದೆ ಎಂದ ಠಾಕ್ರೆ
-ಎಲ್ಲ ಶಾಸಕರ ಶಪಥ

ಮುಂಬೈ: ಕಾಂಗ್ರೆಸ್, ಶಿವಸೇನೆ ಮತ್ತು ಎನ್‍ಸಿಪಿ ಮೂರು ಪಕ್ಷಗಳು ಇಂದು ನಗರದ ಖಾಸಗಿ ಹೋಟೆಲಿನಲ್ಲಿ 162 ಶಾಸಕರೊಂದಿಗೆ ಶಕ್ತಿ ಪ್ರದರ್ಶನ ಮಾಡಿವೆ.

ಈ ವೇಳೆ ಮಾತನಾಡಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಕರ್ನಾಟಕದಲ್ಲಿ ನಡೆದಂತೆ ಇಲ್ಲಿ ನಡೆಯಲ್ಲ. ಇದು ಮಣಿಪುರ ಮತ್ತು ಗೋವಾ ಅಲ್ಲ ಎಂದು ಬಿಜೆಪಿ ತಿಳಿದುಕೊಳ್ಳಬೇಕು. ಬಹುಮತ ಇಲ್ಲದಿದ್ದರೂ ಬಿಜೆಪಿ ಕೆಲವು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದೆ. ಬಿಜೆಪಿ ಅನೈತಿಕವಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇತಿಹಾಸ ಸೃಷ್ಟಿ – ಒಂದೇ ವರ್ಷ ಮೂರು ಬಾರಿ ರಜಾದಿನದಲ್ಲಿ ಸುಪ್ರೀಂ ಕಲಾಪ

ಗೆಳೆಯರ ಸಂಖ್ಯೆ ಹೆಚ್ಚಾಗಿದ್ದು, ಒಂದೇ ಫೋಟೋದಲ್ಲಿ ಎಲ್ಲರನ್ನು ಸೆರೆ ಹಿಡಿಯಲು ಆಗುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶ ಬಂದ ಕೂಡಲೇ ನಾವೆಲ್ಲರೂ ವಿಶ್ವಾಸಮತ ಸಾಬೀತುಪಡಿಸಲು ಸಿದ್ಧರಿದ್ದೇವೆ. ಆ ದಿನದಂದು ನೀವೆಲ್ಲರೂ ತಯಾರಾಗಿರಬೇಕು. ಆಯ್ಕೆಯಾಗಿರುವ ಶಾಸಕರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದ್ದು, ನೀವೆಲ್ಲರೂ ಎಚ್ಚರದಿಂದಿರಬೇಕೆಂದು ಎಲ್ಲ ಶಾಸಕರಿಗೆ ಉದ್ಧವ್ ಠಾಕ್ರೆ ಸಲಹೆ ನೀಡಿದರು. ಇದನ್ನೂ ಓದಿ: ಮಹಾರಾಷ್ಟ್ರದಿಂದಲೇ ಬಿಜೆಪಿಯ ಅಂತ್ಯ ಆರಂಭ: ಶಿವಸೇನೆ

ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಯಾರು ಪಕ್ಷದ ವಿರುದ್ಧ ಹೋಗುವಂತಿಲ್ಲ. ಯಾರ ಪ್ರಲೋಭನೆಗೆ ಒಳಗಾಗದೇ ಪಕ್ಷಕ್ಕೆ ನಿಷ್ಠೆರಾಗಿರಬೇಕು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಪಕ್ಷ ವಿರೋಧಿ ಕೆಲಸಗಳಲ್ಲಿ ಭಾಗಿಯಾದ್ರೆ ಮೂರು ಪಕ್ಷಗಳು ಕ್ರಮ ಜರುಗಿಸುತ್ತೇವೆ. ಅಜಿತ್ ಪವಾರ್ ತಮ್ಮ ತೀರ್ಮಾನದ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಅನುಭವಿಸಲಿದ್ದಾರೆ. ಈಗ ಶಿವಸೇನೆ ನಮ್ಮ ಜೊತೆಯಲ್ಲಿದ್ದು, ತಪ್ಪು ಮಾಡಿದವರಿಗೆ ಪಾಠ ಕಲಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸುಪ್ರೀಂನಲ್ಲಿ ‘ಮಹಾ’ ಬಿಕ್ಕಟ್ಟು- ಕ್ಷಣ ಕ್ಷಣಕ್ಕೂ ರೋಚಕತೆ ಸೃಷ್ಟಿಸಿದ ವಾದ-ಪ್ರತಿವಾದ

ಕೊನೆಗೆ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಶಾಸಕರು ಮೈತ್ರಿಯ ಶಪಥ ಸ್ವೀಕರಿಸಿದರು. ಸೋನಿಯಾ ಗಾಂಧಿ, ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರಕ್ಕೆ ನಾವು ಬೆಂಬಲ ನೀಡುತ್ತೇವೆ ಎಂಬ ಶಪಥವನ್ನು ಮೂರು ಪಕ್ಷಗಳ ಶಾಸಕರಿಗೆ ಬೋಧಿಸಲಾಯ್ತು. ಇದನ್ನೂ ಓದಿ: 1978ರ ಇತಿಹಾಸ ಮರುಕಳಿಸಿದ ಅಜಿತ್ ಪವಾರ್

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್, ಎನ್‍ಸಿಪಿ ಮತ್ತು ಶಿವಸೇನೆ ಎಲ್ಲ ಹಿರಿಯ ನಾಯಕರು ಶಕ್ತಿ ಪ್ರದರ್ಶನದಲ್ಲಿ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *