ಬಡ್ಡಿರಹಿತವಾಗಿ ಮಹಾರಾಷ್ಟ್ರ ಸರ್ಕಾರಕ್ಕೆ 500 ಕೋಟಿ ರೂ. ಸಾಲಕೊಟ್ಟ ಶಿರಡಿ ದೇವಾಲಯ

ಮುಂಬೈ: ಕುಡಿಯುವ ನೀರು ಯೋಜನೆಗಾಗಿ ಶಿರಡಿ ದೇವಾಲಯ ಸಮಿತಿ ಮಹಾರಾಷ್ಟ್ರ ಸರ್ಕಾರಕ್ಕೆ ಬಡ್ಡಿ ರಹಿತವಾಗಿ 500 ಕೋಟಿ ರೂಪಾಯಿ ಸಾಲವನ್ನು ನೀಡಿದೆ.

ಮಹಾರಾಷ್ಟ್ರದ ಅಹಮದ್‍ನಗರ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ನೀರಾವರಿ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಕೈಗೆತ್ತಿಕೊಂಡಿತ್ತು. ಆದರೆ ಹಣದ ಕೊರತೆಯಿಂದಾಗಿ ಯೋಜನೆಯನ್ನು ಅರ್ಧಕ್ಕೆ ಕೈ ಬಿಟ್ಟಿತ್ತು. ಯೋಜನೆಯನ್ನು ಪೂರ್ಣಗೊಳಿಸುವುದಕ್ಕಾಗಿ ಬಿಜೆಪಿ ಶಿರಡಿ ದೇವಾಲಯದಿಂದ ಆರ್ಥಿಕ ಸಹಾಯ ಕೇಳಲು ನಿರ್ಧರಿಸುತ್ತು.

ಸರ್ಕಾರದ ಪ್ರತಿನಿಧಿಗಳು ಶಿರಡಿ ದೇವಾಲಯದ ಸಮಿತಿಯ ಅಧ್ಯಕ್ಷರಾಗಿರುವ ಬಿಜೆಪಿಯ ಸುರೇಶ್ ಹವಾರೆಯನ್ನು ಭೇಟಿ ಮಾಡಿ ಚರ್ಚಿಸಿದ್ದರು. ಸರ್ಕಾರದ ಕೋರಿಕೆಯನ್ನು ಈಡೇರಿಸಿದ ಶಿರಡಿ ದೇವಾಲಯ ಸರ್ಕಾರಕ್ಕೆ ಬಡ್ಡಿರಹಿತವಾಗಿ 500 ಕೋಟಿ ರೂಪಾಯಿಯನ್ನು ನೀಡಲು ಒಪ್ಪಿಗೆ ಸೂಚಿಸಿದೆ.

ಈ ಕುರಿತು ಸರ್ಕಾರದ ಅಧಿಕಾರಿಗಳು ಮಾತನಾಡಿ, ಶಿರಡಿ ಸಾಯಿಬಾಬಾ ದೇವಾಲಯ ಗೋದಾವರಿ ಹಾಗೂ ಮರಾಠವಾಡದ ನೀರಾವರಿ ಅಭಿವೃದ್ಧಿ ಕಾರ್ಪೋರೇಷನ್ ಯೋಜನೆಗೆ ಆರ್ಥಿಕ ನೆರವನ್ನು ನೀಡುವ ಬಗ್ಗೆ ಒಪ್ಪಿಕೊಂಡಿದೆ. ದೇವಾಲಯದ ಇತಿಹಾಸದಲ್ಲೇ ಇದೊಂದು ಮಹತ್ವದ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ಗೋದಾವರಿ ಹಾಗೂ ಮರಾಠವಾಡದ ನೀರಾವರಿ ಯೋಜನೆಗೆ ಒಟ್ಟು 1,200 ಕೋಟಿ ರೂಪಾಯಿಗಳ ಅವಶ್ಯಕತೆಯಿದೆ. ಇದರಲ್ಲಿ 500 ಕೋಟಿ ರೂಪಾಯಿಯನ್ನು ಶಿರಡಿ ದೇವಾಲಯ ಸಮಿತಿ ನೀಡಿದರೆ ಉಳಿದ 700 ಕೋಟಿ ರೂಪಾಯಿಯನ್ನು ಸರ್ಕಾರ ನೀಡಲಿದೆ. ಅಲ್ಲದೇ ಸಾಲ ಮರುಪಾವತಿಗೆ ಶಿರಡಿ ದೇವಾಲಯ ಯಾವುದೇ ವಾಯಿದೆಯನ್ನು ಸಹ ನೀಡಿಲ್ಲ.

ಮಾಹಿತಿಗಳ ಪ್ರಕಾರ ಶಿರಡಿ ದೇವಾಲಯ ಒಟ್ಟು 2,100 ಕೋಟಿ ರೂ ಹಣವನ್ನು ಠೇವಣಿಯಾಗಿ ಇಟ್ಟಿದೆ. ದೇವಾಲಯಕ್ಕೆ ಪ್ರತಿನಿತ್ಯ 2 ಕೋಟಿ ರೂಪಾಯಿ ಆದಾಯ ಬರುತ್ತದೆ. ವಾರ್ಷಿಕವಾಗಿ 700 ಕೋಟಿ ಆದಾಯ ಗಳಿಸುತ್ತದೆ. ಪ್ರತಿನಿತ್ಯ 70,000 ಭಕ್ತರು ಸಾಯಿಬಾಬಾರ ದರ್ಶನವನ್ನು ಪಡೆದುಕೊಳ್ಳುತ್ತಾರೆ. ವಿಶೇಷ ದಿನಗಳಂದು 3.5 ಲಕ್ಷಕ್ಕೂ ಹೆಚ್ಚಿನ ಭಕ್ತರು ದೇವಾಲಯಕ್ಕೆ ಬರುತ್ತಾರೆ. ದೇಶದಲ್ಲಿಯೇ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಶಿರಡಿ ದೇವಾಲಯವು ಸಹ ಒಂದಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *