ಮಂಗಳೂರು-ಶಿರಾಡಿ-ಬೆಂಗಳೂರು ಸಂಚಾರಕ್ಕೆ ಸದ್ಯಕ್ಕೆ ಶುರುವಾಗಲ್ಲ!

– ಅನಿರ್ದಿಷ್ಟಾವಧಿಗೆ ಸಂಚಾರ ನಿಷೇಧ ಹೇರಿದ ದಕ್ಷಿಣ ಕನ್ನಡ ಡಿಸಿ

ಮಂಗಳೂರು: ಮಂಗಳೂರು-ಬೆಂಗಳೂರು ಸಂಚಾರ ಶಿರಾಡಿ ಘಾಟ್ ಮೂಲಕ ಸದ್ಯಕ್ಕಂತೂ ಆರಂಭವಾಗುವ ಸಾಧ್ಯತೆಯಿಲ್ಲ. ಭಾರೀ ಮಳೆಯಿಂದಾಗಿ ಶಿರಾಡಿಘಾಟ್‍ನಲ್ಲಿ ಆಗಸ್ಟ್ 25ರವರೆಗೆ ವಾಹನ ಸಂಚಾರಕ್ಕೆ ಹೇರಿದ ನಿಷೇಧವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಮಳೆ ನಿಂತರೂ ಶಿರಾಡಿ ಘಾಟ್‍ನಲ್ಲಿ ಕೆಲ ಪ್ರದೇಶಗಳಲ್ಲಿ ಗುಡ್ಡಕುಸಿತ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ನಿಷೇಧವನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸಲಾಗಿದೆ. ಕಳೆದ ವಾರ ಸುರಿದ ಭಾರೀ ಮಳೆಗೆ ಶಿರಾಡಿಘಾಟ್‍ನ ಹಲವೆಡೆ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೆ ಹೆಚ್ಚಿನ ತೊಂದರೆಯಾಗಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆಗಳನ್ನು ಶೀಘ್ರವೇ ಅಭಿವೃದ್ಧಿ ಪಡಿಸುವಂತೆ ಬೇಡಿಕೆ ಇಟ್ಟು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ #ConnectUsToMangalore ಬಳಸಿ ಅಭಿಯಾನ ಆರಂಭಿಸಿದ್ದಾರೆ.

ಕಳೆದ ವಾರದ ಮಳೆ ವೇಳೆ ಶಿರಾಡಿ ಘಾಟ್‍ನ ದೊಡ್ಡತಪ್ಲು ಬಳಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿತ್ತು. ಈ ಘಟನೆಯಲ್ಲಿ ಕೆ.ಆರ್.ಪೇಟೆ ಮೂಲದ ಸಂದೀಪ್ ಹಾಗು ಮಾನ್ವಿ ಮೂಲದ ವೆಂಕಟೇಶ್ ಸಾವನ್ನಪ್ಪಿದ್ದರು. ಇನ್ನು ಟ್ಯಾಂಕರ್ ನೋಡಲು ಹೋದ ಮಂಗಳೂರು ಮೂಲದ ರಾಮದೇವ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈಗ ಮತ್ತೇ ಗುಡ್ಡ ಕುಸಿತ ಹೆಚ್ಚಾಗಿದ್ದರಿಂದ ಮುಂದಾಗುವ ಅನಾಹುತ ತಪ್ಪಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಎಲ್ಲ ರೀತಿಯ ವಾಹಗಳ ಸಂಚಾರಕ್ಕೂ ನಿರ್ಬಂಧ ಹೇರಿದೆ. ಇದನ್ನೂ ಓದಿ: #ConnectUsToMangalore ಕರಾವಳಿ ಸಂಪರ್ಕಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *