ಗುರುವಾರ ಶಿವಮೊಗ್ಗದ ಪ್ರತಿ ಮನೆಗೂ ಲಾಡು ವಿತರಣೆ – ಈಶ್ವರಪ್ಪ

ಶಿವಮೊಗ್ಗ: ಇದೇ ತಿಂಗಳು ಮೇ 30 ರಂದು ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಪ್ರತಿ ಮನೆಗೂ ಲಾಡು ವಿತರಣೆ ಮಾಡಲಾಗುತ್ತದೆ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 30 ರಂದು ಪ್ರತಿ ಬೂತ್‍ನಲ್ಲೂ ಒಂದು ಲಕ್ಷ ಲಾಡು ವಿತರಣೆ ಮಾಡಲಾಗುವುದು. ಈಗಾಗಲೇ ಮೂರು ಕಡೆ ಲಾಡು ರೆಡಿ ಮಾಡಲಾಗುತ್ತಿದೆ. ಆ ದಿನ ನಾನು ದೆಹಲಿಗೆ ತೆರಳುವುದಿಲ್ಲ. ಇಲ್ಲಿಯೇ ಜನರ ಜೊತೆ ಸಂಭ್ರಮ ಆಚರಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಸರ್ಕಾದಿಂದ ಜಿಂದಾಲ್ ಕಂಪನಿಗೆ ಭೂಮಿ ಕೊಡುವ ವಿಚಾರದ ಬಗ್ಗೆ ಕೇಳಿದಾಗ, ಮೂರು ಬಿಟ್ಟ ಮೈತ್ರಿ ಸರ್ಕಾರ 3,666 ಎಕರೆ ಜಾಗವನ್ನು ಮಾರಾಟ ಮಾಡಲು ಹೊರಟಿದ್ದಾರೆ. ಈ ಸರ್ಕಾರ ನದಿ, ನೀರು, ಹೆಣ್ಣುಮಕ್ಕಳ ಬಗ್ಗೆ ಗಮನ ನೀಡುತ್ತಿಲ್ಲ. ಜಿಂದಾಲ್ ಕಂಪನಿಯವರು ಸರ್ಕಾರಕ್ಕೆ ಸಾವಿರಾರು ಕೋಟಿ ಬಾಕಿ ಕೊಡಬೇಕಿದೆ. ಹೀಗಿರುವಾಗ 3,666 ಎಕರೆ ಭೂಮಿಯನ್ನು 30 ಕೋಟಿಗೆ ಮಾರಾಟ ಮಾಡಲು ಹೊರಟಿದ್ದಾರೆ ಇದನ್ನು ಕೇಳಿದರೆ ಭಯವಾಗುತ್ತದೆ ಎಂದು ಹೇಳಿದರು. ಇದನ್ನು ಓದಿ: ಚುನಾವಣೆ ಬಳಿಕ ಮೊದಲ ಸಂಪುಟ ಸಭೆ – ವಿವಾದಕ್ಕೀಡಾಯ್ತು ಸರ್ಕಾರದ ನಿರ್ಣಯ

ಮೈತ್ರಿ ಸರ್ಕಾರಕ್ಕೆ ಪತನವಾಗುವ ಭಯ ಇದ್ದು ಅದಕ್ಕೆ ಎಷ್ಟು ಆಗುತ್ತೋ ಅಷ್ಟು ಬಾಚಿಕೊಂಡು ಹೋಗಲು ತೀರ್ಮಾನ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಮೇಲೂ ಈ ತೀರ್ಮಾನ ಮಾಡಿದ್ದಾರೆ ಇದನ್ನು ಸರ್ಕಾರ ರದ್ದು ಮಾಡಬೇಕು. ಇಲ್ಲದಿದ್ದರೆ ಬಿಜೆಪಿ ನೇತೃತ್ವದಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ. ಶೀಘ್ರದಲ್ಲೇ ಬೆಂಗಳೂರಿನಲ್ಲಿ ಬಿಜೆಪಿ ಶಾಸಕರು ಮತ್ತು ನಾಯಕರು ಸಭೆ ಸೇರಲಿದ್ದೇವೆ. ಆ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.

ಆಪರೇಷನ್ ಕಮಲದ ಬಗ್ಗೆ ಕೇಳಿದ ಪ್ರಶ್ನೆಗೆ, ನಾವು ಆಪರೇಷನ್ ಕಮಲ ಮಾಡುವುದಿಲ್ಲ. ನಮ್ಮ ಪಕ್ಷದಲ್ಲಿ 105 ಹುಲಿಗಳು ಇದ್ದೇವೆ. ನಮ್ಮನ್ನು ಮುಟ್ಟುವ ಶಕ್ತಿ ಯಾರಿಗೂ ಇಲ್ಲ. ಮೈತ್ರಿಯೇ ಬೇಡ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಾರೆ. ಕಾಂಗ್ರೆಸ್ ನಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಸರ್ಕಾರ ಬೀಳಿಸುವ ಪ್ರಯತ್ನ ನಾವು ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *