ಪೊಲೀಸ್ ಠಾಣೆ ಮೆಟ್ಟಿಲೇರಿದ ಶಿಲ್ಪಾ ಗಣೇಶ್ !

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಾಡಪ್ರಭು ಕೆಂಪೇಗೌಡರಿಗೆ ಶಿಲ್ಪಾ ಗಣೇಶ್‍ರಿಂದ ಅವಮಾನವಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಪಟ್ಟಂತೆ ಕಿಡಿಗೇಡಿಗಳ ವಿರುದ್ಧ ಗೋಲ್ಡನ್ ಸ್ಟಾರ್ ಪತ್ನಿ ಶಿಲ್ಪಾ ಗರಂ ಆಗಿದ್ದಾರೆ.

ಶಿಲ್ಪಾ ಗಣೇಶ್ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಾಡಪ್ರಭುವಿಗೆ ಅವಮಾನವಾಗಿದ್ದು, ಕೆಂಪೇಗೌಡರಿಗಿಂತ ಸಾಧನೆ ಮಾಡಿದವರು ಅನೇಕರಿದ್ದಾರೆ. ಸಿಲ್ಕ್ ಯುನಿವರ್ಸಿಟಿಗೆ ಕೆಂಪೇಗೌಡರ ಹೆಸರಿಡುವ ಅವಶ್ಯಕತೆ ಇರಲಿಲ್ಲ. ಹೀಗೆಂದು ಫೋಟೋ ಸಮೇತೆ ಶಿಲ್ಪಾ ಗಣೇಶ್ ಹೆಸರಿನ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಈ ವಿಚಾರಕ್ಕೆ ಶಿಲ್ಪಾರಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಶಿಲ್ಪಾ ಗಣೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ನನಗೆ ಕೆಂಪೇಗೌಡರ ಬಗ್ಗೆ ಅಪಾರ ಗೌರವವಿದೆ. ಈ ವಿಚಾರವಾಗಿ ಫೇಸ್ ಬುಕ್ ನಲ್ಲಿ ಹೇಳಿಕೆ ನೀಡಿದ್ದೇನೆ. ಆದರೆ ಇದನ್ನು ಸೃಷ್ಠಿಸಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ಎಂದು ಆರ್ ಆರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?
ಯಾರೋ ಅಪರಿಚಿತರು ಸಾಮಾಜಿಕ ಜಾಲತಾಣದಲ್ಲಿ ನನ್ನ ಭಾವಚಿತ್ರವನ್ನು ಬಳಸಿಕೊಂಡು ನಾಡಪ್ರಭು ಕಂಪೇಗೌಡರ ವಿರುದ್ಧ ನಕಲಿ ಹೇಳಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ.

ಜುಲೈ 6ರಂದು ನಾನು ಎಂದಿನಂತೆ ನನ್ನ ವಾಟ್ಸಾಪ್ ತೆಗೆದು ನೋಡಿದಾಗ ಗಿರಿಗೌಡ ಎಂಬವರ ನಂಬರ್ ನಿಂದ ನಾನು ಬರೆಯದೆ ಮತ್ತು ಹೇಳದೆ ಇರುವಂತಹ ಹೇಳಿಕೆಯನ್ನು ಭಾವಚಿತ್ರ ಸಮೇತ ಸೃಷ್ಟಿ ಮಾಡಲಾಗಿತ್ತು. ಅದರಲ್ಲಿ ನಾಡಪ್ರಭು ಕೆಂಪೇಗೌಡರ ಬಗ್ಗೆ “ಕೆಂಪೇಗೌಡರಿಗಿಂತ ಸಾಧನೆ ಮಾಡಿದವರು ಅನೇಕರಿದ್ದಾರೆ. ಸ್ಕಿಲ್ ಯುನಿವರ್ಸಿಟಿಗೆ ಕೆಂಪೇಗೌಡರ ಹೆಸರಿಡುವ ಅವಶ್ಯಕತೆ ಇರಲಿಲ್ಲ” ಎಂದು ಬರೆದು ಅದರ ಕೆಳಗೆ ಶಿಲ್ಪಾ ಗಣೇಶ್ ಎಂದು ನನ್ನ ಹೆಸರನ್ನು ಬರೆದಿದ್ದಾರೆ.

ಇದನ್ನು ನೋಡಿದ ನನಗೆ ಆಶ್ಚರ್ಯವಾಯಿತ್ತು. ಕೂಡಲೇ ನಾನು ನನ್ನ ನಿಜವಾದ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಯಿಂದ ನಕಲಿ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದೇನೆ. ನಾಡಪ್ರಭು ಕೆಂಪೇಗೌಡರ ಬಗ್ಗೆ ಅಪಾರವಾದ ಗೌರವವಿದೆ. ಅವರನ್ನು ಅವಮಾನ ಮಾಡುವಂತಹ ಯಾವುದೇ ಹೇಳಿಕೆಗಳನ್ನು ನಾನು ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದೇನೆ. ನನ್ನ ಹೆಸರನ್ನು ಬಳಸಿಕೊಂಡು ವಿನಾಕಾರಣ ಹೆಸರಿಗೆ ಚ್ಯುತಿ ತರುವ ಕೆಲಸವನ್ನು ಮಾಡಿರುವವರನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ದೂರಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಆರ್ ಆರ್ ನಗರ ಪೊಲೀಸರು ಕಿಡಿಗೆಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *